ಉತ್ತರ ಭಾರತದಲ್ಲಿ ಭೀಕರ ಚಳಿ: ವಾಡಿಕೆಗಿಂತ ಕುಸಿದ ಗರಿಷ್ಠ ತಾಪಮಾನ
ಹೊಸದಿಲ್ಲಿ: ಉತ್ತರ ಭಾರತದಲ್ಲಿ ಗುರುವಾರ ತೀವ್ರ ಚಳಿಯ ವಾತಾವರಣ ಕಂಡುಬಂದಿದ್ದು, ಗರಿಷ್ಠ ತಾಪಮಾನ 12-18 ಡಿಗ್ರಿಯ ಆಸುಪಾಸಿನಲ್ಲಿತ್ತು. ಇದು ವಾಡಿಕೆಯ ಸರಾಸರಿಗಿಂತ ತೀರಾ ಕಡಿಮೆ.
ಕಡಿಮೆ ಮೋಡ ಮತ್ತು ಬಿಸಿಲಿನ ಅಭಾವದಿಂದಾಗಿ ಪಂಜಾಬ್, ಹರ್ಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಉತ್ತರ ಭಾಗದಲ್ಲಿ ಈ ಪರಿಸ್ಥಿತಿ ತಲೆದೋರಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಹವಾಮಾನ ಇಲಾಖೆಯ ಪ್ರಕಾರ, ಗರಿಷ್ಠ ತಾಪಮಾನ ವಾಡಿಕೆಯ ಉಷ್ಣಾಂಶಕ್ಕಿಂತ ಶೇಕಡ 4.5- 6.4ರಷ್ಟು ಕಡಿಮೆ. ಸರಾಸರಿಗಿಂತ ಉಷ್ಣಾಂಶ 6.5 ಡಿಗ್ರಿಯಷ್ಟು ಕುಸಿದರೆ ಇದನ್ನು ತೀವ್ರ ಚಳಿಯ ದಿನ ಎಂದು ಪರಿಗಣಿಸಲಾಗುತ್ತದೆ. ರಾಜಧಾನಿಯ ಸಪ್ಧರ್ ಜಂಗ್ ವೀಕ್ಷಣಾಲಯದಲ್ಲಿ ಗರಿಷ್ಠ ಉಷ್ಣಾಂಶ 12.5 ಡಿಗ್ರಿ ಸೆಲ್ಷಿಯಸ್ ವರದಿಯಾಗಿದ್ದು, ಇದು ವಾಡಿಕೆಗಿಂತ 6.8 ಡಿಗ್ರಿಯಷ್ಟು ಕಡಿಮೆ.
ಹರ್ಯಾಣದ ಹಿಸ್ಸಾರ್ನ ಲ್ಲಿ 12 ಡಿಗ್ರಿ ಸೆಲ್ಷಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಈ ಅವಧಿಯ ವಾಡಿಕೆ ಉಷ್ನಾಂಶಕ್ಕಿಂತ 6.8 ಡಿಗ್ರಿಯಷ್ಟು ಕಡಿಮೆ. ಪಂಜಾಬ್ನ ಪಾಟಿಯಾಲಾದಲ್ಲಿ 10.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವಿದ್ದು, ಇದು ವಾಡಿಕೆಗಿಂತ 8.1 ಡಿಗ್ರಿಯಷ್ಟು ಕಡಿಮೆ. ರಾಜಸ್ಥಾನದ ಕೋಟಾದಲ್ಲಿ ವಾಡಿಕೆಗಿಂತ 8 ಡಿಗ್ರಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಗರಿಷ್ಠ ತಾಪಮಾನ 14.1 ಡಿಗ್ರಿ ಇತ್ತು. ಮಧ್ಯಪ್ರದೇಶದ ಬೋಪಾಲ್ನಲ್ಲಿ ಗರಿಷ್ಠ ತಾಪಮಾನ 16.7 ಡಿಗ್ರಿ ದಾಖಲಾಗಿದ್ದು, ಇದು ವಾಡಿಕೆಯ ಉಷ್ಣಾಂಶಕ್ಕಿಂತ 7.3 ಡಿಗ್ರಿಯಷ್ಟು ಕಡಿಮೆ ಎಂದು ಮೂಲಗಳು ಹೇಳಿವೆ.