ಪಿಣರಾಯಿ ಪುತ್ರಿಯ ಕಂಪೆನಿ ಸೇರಿದಂತೆ ವಿವಿಧ ಸಂಸ್ಥೆಗಳು ಗಣ್ಯರ ವಿರುದ್ಧ ಎಸ್ ಎಫ್ ಐ ಓ ತನಿಖೆ : ಹೈಕೋರ್ಟ್ ಗೆ ಕೇಂದ್ರದ ವಿವರಣೆ

Update: 2024-02-13 15:33 GMT

                                                                                         ಕರ್ನಾಟಕ ಹೈಕೋರ್ಟ್



ಬೆಂಗಳೂರು : ಕೇರಳದಲ್ಲಿ ಮರಳು ಖನಿಜ ಉತ್ಖನನದಲ್ಲಿ ತೊಡಗಿರುವ ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರುಟೈಲ್ ಲಿಮಿಟೆಡ್ (ಸಿಎಂಆರ್ಎಲ್) ಕಂಪೆನಿಯು, ಕೇರಳದ ವಿವಿಧ ರಾಜಕೀಯ ಗಣ್ಯರಿಗೆ ಹಾಗೂ ಸಂಸ್ಥೆಗಳಿಗೆ ಒಟ್ಟು ಸುಮಾರು 135 ಕೋಟಿ ರೂ.ಅಕ್ರಮ ಪಾವತಿಗಳನ್ನು ಮಾಡಿರುವ ಬಗ್ಗೆ ತನಿಖೆ ನಡೆಸಲು ಗಂಭೀರ ವಂಚನೆ ತನಿಖಾ ಕಚೇರಿ (ಎಸ್ಎಫ್ಐಓ)ಗೆ ಆದೇಶ ನೀಡಿರುವುದಾಗಿ ಕೇಂದ್ರ ಸರಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದೆ. ಕಾನೂನುಬಾಹಿರವಾಗಿ ಹಣವನ್ನು ಪಾವತಿಸಿದ ಕಂಪೆನಿಗಳ ಪೈಕಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ನಿರ್ದೇಶಕಿಯಾಗಿರುವ ಎಕ್ಸಾಲೊಜಿಕ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ (ಇ ಎಸ್ ಪಿ ಎಲ್) ಕೂಡಾ ಸೇರಿದೆ ಎಂದು ಅದು ಹೇಳಿದೆ.

ಇ ಎಸ್ ಪಿ ಎಲ್ ಮಾತ್ರವಲ್ಲದೆ ಸಿ ಎಂ ಆರ್ ಎಲ್ ಹಾಗೂ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದೆಯೆದುಂ ಕೇಂದ್ರ ಸರಕಾರವ ನ್ಯಾಯಾಲಯದಲ್ಲಿ ವಿವರಿಸಿದೆ.

ಇ ಎಸ್ ಪಿ ಎಲ್ ಕಂಪೆನಿಯು ನೀಡಿತ್ತೆನ್ನಲಾದ ಸಾಫ್ಟ್ವೇರ್ ಸೇವೆಗೆ ಸಿಎಂಆರ್ಎಲ್ 1.76 ಕೋಟಿ ರೂ. ಹಣವನ್ನು ಪಾವತಿಸಿರುವುದನ್ನು ಬಹಿರಂಗಪಡಿಸದೆ ಇರುವುದರ ವಿರುದ್ಧ ತನಿಖೆ ನಡೆಸಲು ಕೇಂದ್ರ ಸರಕಾರವು ಆದೇಶಿಸಿರುವುದನ್ನು ಪ್ರಶ್ನಿಸಿ ವೀಣಾ ಅವರ ಇ ಎಸ್ ಪಿ ಎಲ್ ಕಂಪೆನಿಯು ರಾಜ್ಯ ಹೈಕೋರ್ಟ್ ಮೆಟ್ಟಲೇರಿತ್ತು. ಅರ್ಜಿಯ ಆಲಿಕೆಯ ಸಂದರ್ಭದಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಈ ವಿಷಯವನ್ನು ಬಹಿರಂಪಡಿಸಿದರು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಅರವಿಂದ ದಾತಾರ್ ಅವರು ಕರಾಳವಾದ ಕಂಪನಿಗಳ ಕಾಯ್ದೆಯ ಸೆಕ್ಷನ್ 212 ರಡಿ ಪರ್ಯಾಯ ತನಿಖೆಯನ್ನು ಎಸ್ಎಫ್ಐಓ ನಡೆಸುವಂತೆ ಆದೇಶಿಸಲು ಸಾಧ್ಯವಿಲ್ಲವೆಂದು ಹಿರಿಯ ನ್ಯಾಯವಾದಿ ಅರವಿಂದ ದಾತಾರ್ ಅವರು ವಾದಿಸಿದರು.

ಕಪ್ಪುಹಣ ಬಿಳುಪು ತಡೆ ಕಾಯ್ದೆ ಹಾಗೂ ಕಾನೂನುಬಾಹಿರ ಚಟುವಟಿಕೆ (ತಡೆ)ಗಳ ಕಾಯ್ದೆಯ ನಿಯಮಗಳನ್ನು ಪ್ರಯೋಗಿಸಿ ಅರ್ಜಿದಾರರ ಬಂಧನ ಹಾಗೂ ಅವರ ಆಸ್ತಿಗಳನ್ನು ಮುಟ್ಚುಗೋಲು ಹಾಕುವ ಸಾಧ್ಯತೆಗಳಿವೆಯೆಂದು ದಾತಾರ್ ಆತಂಕ ವ್ಯಕ್ತಪಡಿಸಿದರು.

ಉಭಯ ಕಕ್ಷಿದಾರರ ಆಲಿಕೆಯನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಆದೇಶವನ್ನು ಕಾದಿರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News