ವಿಶ್ರಾಂತಿ ಸಂದರ್ಭದಲ್ಲಿ ʼಶೇರಿಂಗ್ ಕೊಠಡಿʼ ; ಕಳವಳ ವ್ಯಕ್ತಪಡಿಸಿದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಗಳು

Update: 2023-11-22 16:41 GMT

Photo: PTI 

ಹೊಸ ದಿಲ್ಲಿ: ವಿಶ್ರಾಂತಿ ಸಂದರ್ಭದಲ್ಲಿ ಕೊಠಡಿ ಹಂಚಿಕೊಳ್ಳಬೇಕು ಎಂಬ ನಿರ್ಧಾರದ ಕುರಿತು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಕ್ಯಾಬಿನ್ ಸಿಬ್ಬಂದಿ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಇದರಿಂದ ವಿಮಾನ ಕರ್ತವ್ಯಕ್ಕೂ ಮುನ್ನ ಅನಿರ್ಬಂಧಿತ ವಿಶ್ರಾಂತಿ ಪಡೆಯಲು ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ, ಕೊಠಡಿ ಹಂಚಿಕೆ ನೀತಿಯು ಇತರೆ ವಿಮಾನ ಯಾನ ಸಂಸ್ಥೆಗಳು ಪಾಲಿಸುತ್ತಿರುವಂತೆಯೇ ಇದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಯಾನ ಸಂಸ್ಥೆ ಸ್ಪಷ್ಟೀಕರಣ ನೀಡಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೂಲಗಳ ಪ್ರಕಾರ, ಇದಲ್ಲದೆ ಕೆಲವು ವಿಮಾನ ಸೇವಾ ಸಿಬ್ಬಂದಿಗಳ ಸೇವಾ ಗುತ್ತಿಗೆಯ ಅವಧಿಯನ್ನು ಮೊಟಕುಗೊಳಿಸಿರುವ ಕುರಿತೂ ಕ್ಯಾಬಿನ್ ಸಿಬ್ಬಂದಿ ಸದಸ್ಯರು ಕಳವಳ ವ್ಯಕ್ತಪಡಿಸಿದ್ದು, ವಿಮಾನ ಯಾನ ಸಂಸ್ಥೆಯಲ್ಲಿನ ಮೌಲ್ಯಮಾಪನ ಪ್ರಕ್ರಿಯೆ ಕುರಿತೂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಲಾಭದಲ್ಲಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ನೊಂದಿಗೆ ನಷ್ಟದಲ್ಲಿರುವ ಎಐಎಕ್ಸ್ ಕನೆಕ್ಟ್ (ಇದಕ್ಕೂ ಮುನ್ನ ಏರ್ ಏಶಿಯಾ ಇಂಡಿಯಾ) ಅನ್ನು ವಿಲೀನಗೊಳಿಸುವುದಕ್ಕೂ ಮುನ್ನ ವಿಮಾನ ಯಾನ ಸಿಬ್ಬಂದಿಗಳಿಗೆ ಹೊರ ದೇಶಗಳಲ್ಲಿ ಪಂಚತಾರಾ ಅಥವಾ ಚತುರ್ ತಾರಾ ಹೋಟೆಲ್ ಗಳಲ್ಲಿ ಕೊಠಡಿಯನ್ನು ನೀಡಲಾಗುತ್ತಿತ್ತು. ಆದರೀಗ, ಈ ಕೊಠಡಿಯನ್ನು ಇಬ್ಬರು ಕ್ಯಾಬಿನ್ ಸಿಬ್ಬಂದಿ ಸದಸ್ಯರು ಹಂಚಿಕೊಳ್ಳಬೇಕಿದೆ.

ಸದ್ಯ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಎಐಎಕ್ಸ್ ಕನೆಕ್ಟ್ ಒಟ್ಟಿಗೆ ಸೇರಿ 5,500ಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ 1,800 ಕ್ಯಾಬಿನ್ ಸಿಬ್ಬಂದಿ ಸದಸ್ಯರಿದ್ದಾರೆ.

ಕ್ಯಾಬಿನ್ ಸಿಬ್ಬಂದಿ ಸದಸ್ಯರು ಕೊಠಡಿಯನ್ನು ಹಂಚಿಕೊಳ್ಳುವ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ವಿಮಾನ ಯಾನ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News