ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಗೆ ಹಿನ್ನಡೆ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಆರು ಮಂದಿ ಬಿಜೆಪಿ ನಾಯಕರು
ಭೋಪಾಲ್: ಚುನಾವಣಾ ರಾಜ್ಯವಾದ ಮಧ್ಯಪ್ರದೇಶದಲ್ಲಿ ಓರ್ವ ಹಾಲಿ ಬಿಜೆಪಿ ಶಾಸಕ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು ಒಂಬತ್ತು ಮಂದಿ ನಾಯಕರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರೆಲ್ಲ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರ ಉಪಸ್ಥಿತಿಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಪಾಳಯಕ್ಕೆ ಸೇರಿಕೊಂಡರು ಎಂದು newindianexpress.com ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಒಂಬತ್ತು ನಾಯಕರ ಪೈಕಿ ಮೂವರು ನಾಯಕರು ಮೂಲ ಬಿಜೆಪಿಗೆ ಸೇರಿದ್ದಾರೆ. ಈ ಪೈಕಿ ಇಂದೋರ್ ನಿಂದ ಐದು ಬಾರಿ, ಬದ್ನಾವರ್(ಧಾರ್)ನಿಂದ ಕ್ರಮವಾಗಿ 1993 ಹಾಗೂ 2013ರಲ್ಲಿ ಗೆಲುವು ಸಾಧಿಸಿದ್ದ ಭನ್ವರ್ ಸಿಂಗ್ ಶೆಖಾವತ್ ಕೂಡಾ ಸೇರಿದ್ದಾರೆ.
ಉಳಿದಂತೆ, ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಉಮಾಶಂಕರ್ ಗುಪ್ತಾರ ಸೋದರಳಿಯ ಹಾಗೂ ಭೋಪಾಲ್ ನ ಬಿಜೆಪಿ ನಾಯಕ ಆಶಿಶ್ ಅಗರ್ವಾಲ್ ‘ಗೋಲು’ ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಹಾಕಿದ್ದಾರೆ. ಇವರೊಂದಿಗೆ ಕತ್ನಿ ಜಿಲ್ಲೆಯ ತಂದೆ-ಪುತ್ರ ಚೆದಿಲಾಲ್ ಪಾಂಡೆ ಹಾಗೂ ಶಿವ್ ರಾಮ್ ಪಾಂಡೆ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದಕ್ಕೂ ಮುನ್ನ, ಗುರುವಾರ ಕೊಲಾರಸ್ (ಶಿವ್ ಪುರಿ) ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ವಿರೇಂದ್ರ ರಘುವಂಶಿ ಬಿಜೆಪಿಯನ್ನು ತೊರೆದಿದ್ದರು. 2020ರಲ್ಲಿ ಕಾಂಗ್ರೆಸ್ ತೊರೆದು, ಜ್ಯೋತಿರಾದಿತ್ಯ ಸಿಂಧ್ಯಾರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದ ಗ್ವಾಲಿಯರ್-ಚಂಬಲ್ ಪ್ರಾಂತ್ಯದ ನಾಯಕರಾದ ಮಾಜಿ ಕಾಂಗ್ರೆಸ್ ಶಾಸಕ ದೇವೇಂದ್ರ ಸಿಂಗ್ ರಘುವಂಶಿಯವರ ಪುತ್ರಿ ಅನ್ಶು ರಘುವಂಶಿ ಹಾಗೂ ಅರವಿಂದ್ ಧಾಕಡ್ ಮತ್ತೆ ಮಾತೃಪಕ್ಷಕ್ಕೆ ಮರಳಿದರು. ಇವರೊಂದಿಗೆ ಝಾನ್ಸಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಸುಜನ್ ಸಿಂಗ್ ಬುಂದೇಲಾರ ಪುತ್ರ ಚಂದ್ರಭೂಷಣ್ ಸಿಂಗ್ ಬುಂದೇಲಾ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖ ನಾಯಕರಾಗಿದ್ದಾರೆ.
2020ರ ಉಪ ಚುನಾವಣೆಯಲ್ಲಿ ಬದ್ನಾವರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲ್ಪಟ್ಟಾಗಿನಿಂದ ಮಾಜಿ ಸಚಿವ ಶೆಖಾವತ್ ಬಿಜೆಪಿಯ ಬಗ್ಗೆ ಅಸಮಾಧಾನಗೊಂಡಿದ್ದರು. ವಿಶ‍್ವಾಸಾರ್ಹ ಮೂಲಗಳ ಪ್ರಕಾರ, ಮುಂಬರುವ ಚುನಾವಣೆಯಲ್ಲಿ ಇಂದೋರ್ ಅಥವಾ ಧಾರ್ ಜಿಲ್ಲೆಗಳಿಂದ ಸ್ಪರ್ಧಿಸಲು ಶೆಖಾವತ್ ಗೆ ಟಿಕೆಟ್ ನೀಡಿದಿರಲು ಆಡಳಿತಾರೂಢ ಪಕ್ಷವಾದ ಬಿಜೆಪಿ ನಿರ್ಧರಿಸಿತ್ತು ಎಂದು ಹೇಳಲಾಗಿದೆ. 1980ರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯರನ್ನು ಇಂದೋರ್ ಚುನಾವಣಾ ರಾಜಕಾರಣಕ್ಕೆ ಎಳೆದು ತಂದ ಶ್ರೇಯಸ್ಸನ್ನು ಹೊಂದಿರುವ ಶೆಖಾವತ್, ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ನಿಷ್ಠಾವಂತ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾದಾಗಿನಿಂದ, ಬಿಜೆಪಿಯು ತನ್ನ ಮೂಲ ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಆರೋಪಿಸುತ್ತಾ ಬರುತ್ತಿದ್ದಾರೆ.
“ನನ್ನಿಂದ ಪರಾಭವಗೊಂಡಿದ್ದವರನ್ನೆಲ್ಲ ರೂ. 35 ಕೋಟಿ ತೆತ್ತು ಖರೀದಿಸಲಾಗಿದೆ. ಪಕ್ಷವನ್ನು ಆರಂಭದಿಂದಲೂ ಬೆಳೆಸಿ, ಅದನ್ನು ಹೆಮ್ಮರವಾಗಿಸಿದ ನಾಯಕರನ್ನು ಸದ್ಯ ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದ್ದು, ಸಿಂಧ್ಯಾ ನಿಷ್ಠರಿಗೆ ಭಾರಿ ಪ್ರಮಾಣದ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ” ಎಂದು ಶೆಖಾವತ್ ದೂರಿದ್ದಾರೆ.