ದಿಲ್ಲಿಯ ವಸಂತ್‌ಕುಂಜ್‌ನಲ್ಲಿ ಶೂಟೌಟ್ ; ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರ ಬಂಧನ

Update: 2023-12-09 16:31 GMT

Photo: @DelhiPolice \ X

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ವಸಂತಕುಂಜ್ ಪ್ರದೇಶದ ಉನ್ನತ ಮಾರುಕಟ್ಟೆ ಪ್ರದೇಶವೊಂದರಲ್ಲಿ ಶುಕ್ರವಾರ ರಾತ್ರಿ ಗುಂಡಿನ ಚಕಮಕಿ ನಡೆದ ಬಳಿಕ ಲಾರೆನ್ಸ್ ಬಿಷ್ಣೋಯಿ ಕ್ರಿಮಿನಲ್ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ದಿಲ್ಲಿ ಪೊಲೀಸರ ವಿಶೇಷ ದಳವು ಬಂಧಿಸಿದೆ.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರಾದ ಆನೀಶ್ 23 ಹಾಗೂ 15 ವರ್ಷ ವಯಸ್ಸಿನ ಬಾಲಕನೊಬ್ಬನನ್ನು ವಸಂತಕುಂಜ್ ಪ್ರದೇಶದ ಪಾಕೆಟ್-9 ಪ್ರದೇಶದಲ್ಲಿ ಬಂಧಿಸಲಾಗಿದೆಯೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ದಿಲ್ಲಿಯಲ್ಲಿರುವ ಪ್ರತಿಷ್ಠಿತ ಹೊಟೇಲೊಂದರ ಮುಂದೆ ಗುಂಡುಹಾರಾಟ ನಡೆಸಲು ಇವರಿಬ್ಬರನ್ನು ಬಿಷ್ಣೋಯಿ ಗ್ಯಾಂಗ್ ನಿಯೋಜಿಸಿದ್ದ ಬಗ್ಗೆ ತಮಗೆ ಮಾಹಿತಿ ಲಭಿಸಿದೆಯೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಹಣ ಸುಲಿಗೆ ಮಾಡುವುದೇ ಈ ದಾಳಿ ಸಂಚಿನ ಉದ್ದೇಶವಾಗಿತ್ತೆಂದು ಅವರು ಹೇಳಿದ್ದಾರೆ.

ಗ್ಯಾಂಗ್‌ಸ್ಟರ್ ಅನ್‌ಮೋಲ್ ಬಿಷ್ಣೋಯಿಯ ನಿರ್ದೇಶದ ಮೇರೆಗೆ ಪಂಜಾಬ್‌ನ ಜೈಲೊಂದರಲ್ಲಿರುವ ಅಮಿತ್ ಈ ದಾಳಿ ಸಂಚನ್ನು ಹೆಣೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಅನ್‌ಮೋಲ್ ಬಿಷ್ಣೋಯಿಯು, ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯಿಯ ಸಹೋದರನಾಗಿದ್ದು, ಕೆನಡದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ತಮ್ಮನ್ನು ಬಂಧಿಸಲು ಬಂದ ಪೊಲೀಸರೆಡೆಗೆ ಐದು ಸುತ್ತು ಗುಂಡುಹಾರಿಸಿದ್ದರು. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವೆಂದು ಅವರು ತಿಳಿಸಿದ್ದಾರೆ.

ಪೊಲೀಸರು ಎರಡು ಪಿಸ್ತೂಲ್‌ಗಳು, ನಾಲ್ಕು ಸಜೀವ ಕಾಡತೂಸುಗಳು ಹಾಗೂ ಒಂದು ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆನೀಶ್ ವಿರುದ್ಧ ಶಸ್ತ್ರಸಜ್ಜಿತವಾಗಿ ದರೋಡೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಹಲ್ಲೆಗೆ ಸಂಬಂಧಿಸಿದ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಬಾಲ ಆರೋಪಿಯ ವಿರುದ್ಧ ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ದರೋಡೆ ಪ್ರಕರಣ ದಾಖಲಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News