ಬೇಸಿಗೆಯನ್ನು ಅರಸಿ 22 ಸಾವಿರ ಕಿ.ಮೀ ವಲಸೆ ಹೋಗುವ ಅಮುರ್ ಫಾಲ್ಕನ್‌ ಗಿಡುಗಗಳು!

Update: 2024-12-08 11:06 GMT

ಸಾಂದರ್ಭಿಕ ಚಿತ್ರ | PC ; freepik.com

ಹೊಸದಿಲ್ಲಿ : ಸೈಬೀರಿಯಾದ ಅಮುರ್ ನದಿ ಪ್ರದೇಶದಲ್ಲಿ ಆವಾಸ ಸ್ಥಾನವನ್ನು ಹೊಂದಿರುವ ಅಮುರ್ ಫಾಲ್ಕನ್(ಒಂದು ಜಾತಿಯ ಗಿಡುಗ)ಗಳು ಪ್ರತಿ ಚಳಿಗಾಲದಲ್ಲಿ ಬೇಸಿಗೆಯನ್ನು ಅರಸಿಕೊಂಡು 22,000 ಕೀ.ಮೀ.ಗಳಷ್ಟು ದೂರವನ್ನು ಕ್ರಮಿಸಿ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗುತ್ತವೆ. ಇವು ಈಶಾನ್ಯ ಭಾರತದ ಮಣಿಪುರ,ಅಸ್ಸಾಂ ಮತ್ತು ನಾಗಾಲ್ಯಾಂಡ್‌ಗಳನ್ನು ತಮ್ಮ ನಿಲುಗುದಾಣವನ್ನಾಗಿ ಮಾಡಿಕೊಂಡಿವೆ. ದಶಕದ ಹಿಂದೆ ಇವುಗಳನ್ನು ಬೇಟೆಯಾಡುತ್ತಿದ್ದ ಸ್ಥಳೀಯ ಜನರಲ್ಲಿ ಜಾಗ್ರತಿ ಮೂಡಿಸಲಾಗಿದ್ದು, ಈಗ ಇದೇ ಜನರು ಈ ಫಾಲ್ಕನ್‌ಗಳನ್ನು ರಕ್ಷಿಸುತ್ತಿದ್ದಾರೆ.

ಮಣಿಪುರದ ತಮೆಂಗ್‌ಲಾಂಗ್ ಜಿಲ್ಲೆಯ ಚಿಲುವಾನ್ ಗ್ರಾಮದ ಹೆಸರನ್ನು ಹೊಂದಿರುವ ಅಮುರ್ ಫಾಲ್ಕನ್ ‘ಚಿಲುವಾನ್ 2’ ಈಗ ವಿಶ್ವದ ಅರ್ಧದಾರಿಯಲ್ಲಿ ಮೊಝಾಂಬಿಕ್‌ನಲ್ಲಿದೆ. ಮಹಾರಾಷ್ಟ್ರದಿಂದ ಐದು ದಿನಗಳ ತಡೆರಹಿತ ಹಾರಾಟದಲ್ಲಿ ಅದು ಅರಬಿ ಸಮುದ್ರವನ್ನು ದಾಟಿ ನ.21ರಂದು ಸೊಮಾಲಿಯಾ ತಲುಪಿತ್ತು. ಕಳೆದ ಎರಡು ವಾರಗಳಲ್ಲಿ ಕಿನ್ಯಾ, ತಾಂಜಾನಿಯಾ ಮತ್ತು ಮೊಝಾಂಬಿಕ್‌ನಲ್ಲಿ ಕಾಣಿಸಿಕೊಂಡಿರುವ ಚಿಲುವಾನ್ 2 ಜೋಹಾನ್ಸ್‌ಬರ್ಗ್‌ನ ತನ್ನ ಬೇಸಿಗೆಯ ಆವಾಸ ಸ್ಥಾನವನ್ನು ತಲುಪಿದ ಬಳಿಕವೇ ವಿಶ್ರಾಂತಿಯನ್ನು ಪಡೆಯಲಿದೆ.

ವಿಜ್ಞಾನಿಗಳು,ವನ್ಯಜೀವಿ ಪರಿಸರಶಾಸ್ತ್ರಜ್ಞರು,ಸರಕಾರಿ ಅಧಿಕಾರಿಗಳು ಮತ್ತು ಮುಖ್ಯವಾಗಿ ಚಿಲುವಾನ್ ಗ್ರಾಮಸ್ಥರು ಸೇರಿದಂತೆ ನೂರಾರು ಭಾರತೀಯರು ದಕ್ಷಿಣ ಆಫ್ರಿಕಾಕ್ಕೆ ಚಿಲುವಾನ್ 2ರ ಹಾರಾಟದ ಮೇಲೆ ನಿಗಾಯಿರಿಸಿದ್ದಾರೆ. ಅವರು ತಮ್ಮ ಪ್ರದೇಶಗಳಲ್ಲಿ ಅಮುರ್ ಫಾಲ್ಕನ್‌ಗಳ ಸಂರಕ್ಷಕರಾಗಿದ್ದಾರೆ. ಪ್ರತಿ ಚಳಿಗಾಲದಲ್ಲಿ ಸೈಬೀರಿಯಾದಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗುವ ಸಾವಿರಾರು ಫಾಲ್ಕನ್‌ಗಳು ಮಾರ್ಗಮಧ್ಯೆ ತಮ್ಮ ನಿಲುದಾಣವಾಗಿ ಮಣಿಪುರ,ಅಸ್ಸಾಂ ಮತ್ತು ನಾಗಾಲ್ಯಾಂಡ್‌ಗಳಲ್ಲಿಯ ಅವರ ಗ್ರಾಮಗಳಲ್ಲಿ ಇಳಿಯುತ್ತವೆ.

‘ಚಿಲುವಾನ್ 2 ’ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಡಬ್ಲ್ಯುಐಐ) ತನ್ನ ಅಮುರ್ ಫಾಲ್ಕನ್ ಟ್ರ್ಯಾಕಿಂಗ್ ಯೋಜನೆಯ ಅಂಗವಾಗಿ ಜಿಯೊಟ್ಯಾಗ್ ಮಾಡಲಾಗಿರುವ ಚಿಲುವಾನ್ ಗ್ರಾಮದ ಎರಡನೇ ಮತ್ತು ಮಣಿಪುರದ ಒಂಭತ್ತನೇ ಫಾಲ್ಕನ್ ಆಗಿದೆ.

‘ನಾವು ಚಿಲುವಾನ್ ಹೆಸರಿನ ಎರಡನೇ ಪಕ್ಷಿಯನ್ನು ಹೊಂದಿರಲು ಚಿಲುವಾನ್ ಗ್ರಾಮಸ್ಥರು ಕಾರಣ, ಇದು ಪಕ್ಷಿಗಳ ಯೋಗಕ್ಷೇಮಕ್ಕೆ ಅವರ ಬದ್ಧತೆಗೆ ಸಾಕ್ಷಿಯಾಗಿದೆ ’ ಎಂದು ಅಮುರ್ ಫಾಲ್ಕನ್ ಯೋಜನೆಯನ್ನು ನಿಕಟವಾಗಿ ಅನುಸರಿಸಿರುವ ತಮಿಳುನಾಡಿನ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹೇಳಿದರು.

ಕೇವಲ ಒಂದು ದಶಕದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಮಣಿಪುರ,ನಾಗಾಲ್ಯಾಂಡ್ ಮತ್ತು ಅಸ್ಸಾಮಿನ ಕೆಲವು ಭಾಗಗಳಲ್ಲಿ ಅವು ಬಂದಿಳಿದಾಗ ಜನರು ಅವುಗಳನ್ನು ಬೇಟೆಯಾಡುತ್ತಿದ್ದರು. ಡಬ್ಲ್ಯೂಐಐ 2013ರಲ್ಲಿ ತನ್ನ ಮೊದಲ ಫಾಲ್ಕನ್ ಟ್ರ್ಯಾಕಿಂಗ್ ಯೋಜನೆಯನ್ನು ನಾಗಾಲ್ಯಾಂಡ್‌ನಲ್ಲಿ ಆರಂಭಿಸಿತ್ತು. ಅಂದಿನಿಂದ ಸ್ಥಳೀಯ ಸಮುದಾಯಗಳಿಂದ ಈ ಗಿಡುಗಗಳ ಬೇಟೆಯನ್ನು ನಿಲ್ಲಿಸಲು ಮತ್ತು ಅವುಗಳನ್ನು ರಕ್ಷಿಸಲು ವರ್ಷಗಳ ಕಾಲ ಜಾಗ್ರತಿ ಅಭಿಯಾನಗಳು,ಟ್ರ್ಯಾಕಿಂಗ್ ಯೋಜನೆಗಳನ್ನು ಕೈಗೊಂಡಿದೆ,ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಶ್ರಮಿಸಿದೆ.

ಮಾನ್ಸೂನ್ ಮಾದರಿಗಳು,ಹೇರಳವಾಗಿ ಗೆದ್ದಲುಗಳ ಲಭ್ಯತೆ,ಅರಬಿ ಸಮುದ್ರದ ಮೇಲೆ ಒಂದೇ ದಿಕ್ಕಿನಲ್ಲಿ ನಿರಂತರವಾಗಿ ಬೀಸುವ ಗಾಳಿ ಇವೆಲ್ಲ ಅಮುರ್ ಫಾಲ್ಕನ್‌ಗಳಿಗೆ ಈಶಾನ್ಯ ಭಾರತವನ್ನು ಅತ್ಯುತ್ತಮ ನಿಲುಗಡೆಯನ್ನಾಗಿ ಮಾಡಿವೆ.

ಪ್ರತಿ ವರ್ಷ ನವಂಬರ್‌ನಲ್ಲಿ ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಆರಂಭಗೊಂಡಾಗ ಅಮುರ್ ಫಾಲ್ಕನ್‌ಗಳು ರಶ್ಯಾ,ಚೀನಾ,ಕೊರಿಯಾದ ಕೆಲವು ಭಾಗಗಳು ಮತ್ತು ಜಪಾನಿನಲ್ಲಿಯ ತಮ್ಮ ಸಂತಾನವೃದ್ಧಿ ನೆಲೆಗಳನ್ನು ತೊರೆದು ಬೇಸಿಗೆಯನ್ನು ಅರಸಿಕೊಂಡು ದಕ್ಷಿಣ ಆಫ್ರಿಕಾಕ್ಕೆ ಪಯಣಿಸತೊಡಗುತ್ತವೆ. ಅವುಗಳ ನಿರಂತರ ಹಾರಾಟದಲ್ಲಿ ಈಶಾನ್ಯ ಭಾರತವು ಒಂದು ನಿಲುದಾಣವಾಗಿದೆ. ಇದು ಶತಮಾನಗಳಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ನಾಗಾಲ್ಯಾಂಡ್ ಮತ್ತು ಮಣಿಪುರವನ್ನು ಹೊರತುಪಡಿಸಿ ಪ್ರಪಂಚದ ಎಲ್ಲಿಯೂ ಈ ಫಾಲ್ಕನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬೇಟೆಯಾಡಿದ್ದಕ್ಕೆ ಪುರಾವೆಗಳಿಲ್ಲ. ಹೀಗಾಗಿ ಅವುಗಳನ್ನು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್(ಐಯುಸಿಎನ್)ನ ಕೆಂಪು ಪಟ್ಟಿಯಲ್ಲಿ ‘ಕನಿಷ್ಠ ಕಳವಳ’ದ ವರ್ಗದಲ್ಲಿ ಇರಿಸಲಾಗಿದೆ.

10 ವರ್ಷಗಳ ಅವಧಿಯಲ್ಲಿ ಡಬ್ಲ್ಯುಐಐ ತಂಡವು ನಾಗಾಲ್ಯಾಂಡ್ ಮತ್ತು ಮಣಿಪುರದ ವಿವಿಧ ಗ್ರಾಮಗಳಲ್ಲಿ 17 ವಿಭಿನ್ನ ಅಮುರ್ ಫಾಲ್ಕನ್‌ಗಳನ್ನು ಸೆರೆಹಿಡಿದು ಜಿಯೋಟ್ಯಾಗ್ ಮಾಡಿದೆ. ಜಿಯೋಟ್ಯಾಗ್ ಮಾಡಲಾದ ಮೊದಲ ಫಾಲ್ಕನ್‌ಗೆ ನಾಗಾಲ್ಯಾಂಡ್‌ನ ಪಾಂಗ್ಟಿ ಗ್ರಾಮದ ಹೆಸರನ್ನಿಡಲಾಗಿದೆ. ಫಾಲ್ಕನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬೇಟೆಯಾಡುತ್ತಿರುವುದು ಇದೇ ಗ್ರಾಮದಲ್ಲಿ ಮೊದಲ ಬಾರಿಗೆ ಬಹಿರಂಗಗೊಂಡಿತ್ತು.

ಸೌಜನ್ಯ : theprint.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News