25 ಸಾವಿರ ಕೋಟಿ ರೂಪಾಯಿ ಗಡಿ ದಾಟಿದ 'SIP' ಹರಿವು!

Update: 2024-11-12 06:52 GMT

ಸಾಂದರ್ಭಿಕ ಚಿತ್ರ (credit: Meta AI)

ಮುಂಬೈ: ದೇಶದಲ್ಲಿ ಹೂಡಿಕೆದಾರರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಸಿಸ್ಟಮ್ಯಾಟಿಕ್ ಇನ್‍ವೆಸ್ಟ್ ಮೆಂಟ್ ಪ್ಲಾನ್ (SIP) ಮೂಲಕ ದಾಖಲೆ ಮೊತ್ತವನ್ನು ಮ್ಯೂಚುವಲ್ ಫಂಡ್‍ಗಳಲ್ಲಿ ತೊಡಗಿಸಿದ್ದಾರೆ. ಷೇರು ಮಾರುಕಟ್ಟೆಯ ಕುಸಿತವನ್ನೂ ಲೆಕ್ಕಿಸದೇ ದಾಖಲೆ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.

ಕಳೆದ ತಿಂಗಳಿನಲ್ಲಿ SIP ಹರಿವು 25,323 ಕೋಟಿ ರೂಪಾಯಿ ಆಗಿದ್ದು, ಮೊಟ್ಟಮೊದಲ ಬಾರಿಗೆ 25 ಸಾವಿರ ಕೋಟಿ ರೂಪಾಯಿಯ ಗಡಿ ದಾಟಿದೆ ಎನ್ನುವುದು ಎಎಂಎಫ್‍ಐ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಒಟ್ಟು SIP ಫೋಲಿಯೊಗಳ ಸಂಖ್ಯೆ ಕೂಡಾ ಈ ತಿಂಗಳು 10 ಕೋಟಿಯ ಮೈಲುಗಲ್ಲು ತಲುಪಿದೆ.

ಈಕ್ವಿಟಿ ಫಂಡ್‍ಗಳ ನಿವ್ವಳ ಒಳಹರಿವು 2021ರ ಮಾರ್ಚ್‍ನಿಂದ ಆರಂಭವಾಗಿ ನಿರಂತರ 44ನೇ ತಿಂಗಳು ಕೂಡಾ ಏರುಗತಿಯಲ್ಲಿದೆ. ಆದಾಗ್ಯೂ ಅಕ್ಟೋಬರ್ ತಿಂಗಳಲ್ಲಿ ಷೇರು ಪೇಟೆ ಕುಸಿತದಿಂದಾಗಿ ಫಂಡ್ ವರ್ಗದಲ್ಲಿ ನಿರ್ವಹಿಸಲ್ಪಡುವ ಆಸ್ತಿಗಳ ಪ್ರಮಾಣ ಸೆಪ್ಟೆಂಬರ್ ತಿಂಗಳಿನಲ್ಲಿ ಇದ್ದ 31.1 ಲಕ್ಷ ಕೋಟಿಗೆ ಹೋಲಿಸಿದರೆ 1.2 ಲಕ್ಷ ಕೋಟಿ ಕುಸಿದು 29.9 ಲಕ್ಷ ಕೋಟಿ ಆಗಿದೆ.

ಇನ್ನೊಂದೆಡೆ ಡೆಟ್ ಫಂಡ್‍ಗಳ ನಿವ್ವಳ ಒಳಹರಿವು 1.6 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ವರ್ಗದಲ್ಲಿ ಲಿಕ್ವಿಡ್ ಫಂಡ್‍ಗಳಲ್ಲಿ 83,863 ಕೋಟಿ ರೂಪಾಯಿ ದಾಖಲೆ ಒಳಹರಿವು ಕಂಡುಬಂದಿದೆ. ಇದರಿಂದಾಗಿ ಮ್ಯೂಚುವಲ್ ಫಂಡ್ ಉದ್ಯಮ ನಿರ್ವಹಿಸುವ ಒಟ್ಟು ಆಸ್ತಿಯ ಪ್ರಮಾಣ 67.25 ಲಕ್ಷ ಕೋಟಿ ರೂಪಾಯಿ ತಲುಪಿರುವುದನ್ನು ಎಎಂಎಫ್‍ಐ ಅಂಕಿ ಅಂಶಗಳು ತೋರಿಸುತ್ತವೆ.

ಅಕ್ಟೋಬರ್ ತಿಂಗಳಲ್ಲಿ ಸಿಪ್ ಖಾತೆಗಳು 10 ಕೋಟಿಯನ್ನು ದಾಟಿರುವುದು ಮತ್ತು ದಾಖಲೆ ಪ್ರಮಾಣದ ಮಾಸಿಕ ಸಿಪ್ ದೇಣಿಗೆ 25,323 ಕೋಟಿ ರೂಪಾಯಿ ತಲುಪಿರುವುದು, ಶಿಸ್ತುಬದ್ಧ ಹೂಡಿಕೆ ಬಗೆಗಿನ ಭಾರತೀಯ ಹೂಡಿಕೆದಾರರ ಆದ್ಯತೆಯನ್ನು ತೋರಿಸುತ್ತದೆ ಎಂದು ಎಎಂಎಫೈ ಮುಖ್ಯ ಎಕ್ಸಿಕ್ಯೂಟಿವ್ ವೆಂಕಟ ಚಲಸಾನಿ ಹೇಳುತ್ತಾರೆ. ಭಾರತೀಯ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‍ಗಳು ಸಂಪತ್ತು ಸೃಷ್ಟಿಯ ಅಡಿಗಲ್ಲು ಎನ್ನುವುದನ್ನು ಇದು ತೋರಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News