ಕಾಂಗ್ರೆಸ್ ಪಕ್ಷದ ಆರು ಮಂದಿ ಶಾಸಕರನ್ನು ಹರ್ಯಾಣಗೆ ಕರೆದೊಯ್ಯಲಾಗಿದೆ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಆರೋಪ
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಪ್ರತಿಪಾದಿಸಿರುವ ಬೆನ್ನಿಗೇ, ಹರ್ಯಾಣ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೋಲೀಸ್ ಬೆಂಗಾವಲು ಪಡೆಯೊಂದಿಗೆ ಐದರಿಂದ ಆರು ಕಾಂಗ್ರೆಸ್ ಶಾಸಕರನ್ನು ಹರ್ಯಾಣಗೆ ಕರೆದೊಯ್ಯಲಾಗಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಆರೋಪಿಸಿದ್ದಾರೆ. ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಾರೆ ಎಂಬ ವರದಿಗಳ ಬೆನ್ನಿಗೇ ಸುಖ್ವಿಂದರ್ ಸಿಂಗ್ ಸುಖು ಅವರಿಂದ ಈ ಆರೋಪ ಬಂದಿದೆ ಎಂದು ndtv ವರದಿ ಮಾಡಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಾರೆ ಎಂಬ ಸೂಚನೆ ಇರುವುದರಿಂದ ಗುರುವಾರ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸುಳಿವನ್ನು ಬಿಜೆಪಿ ನೀಡಿದೆ.
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ 40 ಮಂದಿ ಶಾಸಕರ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸುಲಭವಾಗಿ ಜಯ ಗಳಿಸುವ ವಿಶ್ವಾಸದಲ್ಲಿದೆ.
ಆರು ಕಾಂಗ್ರೆಸ್ ಶಾಸಕರನ್ನು ಹರ್ಯಾಣಗೆ ಸಾಗಿಸಿದ ನಂತರ ಬಿಜೆಪಿ ಆಡಳಿತಾರೂಢ ರಾಜ್ಯವಾದ ಹರ್ಯಾಣವು ಅವಿಶ್ವಾಸ ಮತ ನಿರ್ಣಯದ ತಯಾರಿಯ ಹಿಂದೆ ಇರುವಂತೆ ತೋರುತ್ತಿದೆ.