ದಿಲ್ಲಿ ಗಡಿಯಲ್ಲಿ ಸೋನಮ್ ವಾಂಗ್ಚುಕ್ ಬಂಧನ | ಪೊಲೀಸ್ ಠಾಣೆಗಳಲ್ಲೇ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭ

Update: 2024-10-01 15:04 GMT

ಸೋನಮ್ ವಾಂಗ್ಚುಕ್ | PC : PTI

ಹೊಸದಿಲ್ಲಿ : ಲಡಾಖ್‌ಗೆ ಆರನೇ ಶೆಡ್ಯೂಲ್ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ದಿಲ್ಲಿಗೆ ಪಾದಯಾತ್ರೆ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಇತರ ಸುಮಾರು 120 ಮಂದಿಯನ್ನು ಸೋಮವಾರ ರಾತ್ರಿ ದಿಲ್ಲಿಯ ಸಿಂಘು ಗಡಿಯಲ್ಲಿ ಬಂಧಿಸಲಾಗಿದೆ.

ಸಾಮಾನ್ಯವಾಗಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಗುಡ್ಡಗಾಡು ಪ್ರದೇಶಗಳಿಂದ ತುಂಬಿರುವ ರಾಜ್ಯಗಳನ್ನು ಸಂವಿಧಾನದ ಆರನೇ ಶೆಡ್ಯೂಲ್‌ಗೆ ಸೇರಿಸಲಾಗುತ್ತದೆ. ಇಂಥ ರಾಜ್ಯಗಳು ಸ್ವಾಯತ್ತೆ ಪಡೆದು ತಮ್ಮ ಆಡಳಿತವನ್ನು ತಾವೇ ನಡೆಸಲು ಸಮರ್ಥವಾಗುತ್ತವೆ.

ಪಾದಯಾತ್ರೆಯು ಮಹಾತ್ಮಾ ಗಾಂಧಿ ಜನ್ಮ ದಿನವಾದ ಬುಧವಾರ ಅವರ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ ಸಮಾಪನಗೊಳ್ಳಬೇಕಾಗಿತ್ತು.

ಈ ನಡುವೆ, ಬಂಧಿತ ವಾಂಗ್ಚುಕ್ ಮತ್ತು ಇತರರು ತಮ್ಮನ್ನು ಇರಿಸಲಾಗಿರುವ ಪೊಲೀಸ್ ಠಾಣೆಗಳಲ್ಲೇ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ.

ವಾಂಗ್ಚುಕ್ ನೇತೃತ್ವದ ‘ಡೆಲ್ಲಿ ಚಲೋ ಪಾದಯಾತ್ರೆ’ಯು ಸೆಪ್ಟಂಬರ್ ಒಂದರಂದು ಲೇಹ್‌ ನಲ್ಲಿ ಆರಂಭಗೊಂಡಿತ್ತು.

ಪಾದಯಾತ್ರೆಯನ್ನು ಲೆಹ್ ಅಪೆಕ್ಸ್ ಬಾಡಿ (ಎಲ್‌ಎಬಿ)ಯು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಹಭಾಗಿತ್ವದಲ್ಲಿ ಸಂಘಟಿಸಿದೆ. ಈ ಸಂಘಟನೆಗಳು ಕಳೆದ ನಾಲ್ಕು ವರ್ಷಗಳಿಂದ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿವೆ. ಅವುಗಳ ಇತರ ಪ್ರಮುಖ ಬೇಡಿಕೆಗಳೆಂದರೆ- ಲಡಾಖನ್ನು ಸಂವಿಧಾನದ ಆರನೇ ಶೆಡ್ಯೂಲ್‌ಗೆ ಸೇರಿಸಬೇಕು. ಲಡಾಖ್‌ಗೆ ಲೋಕ ಸೇವಾ ಆಯೋಗವನ್ನು ನೀಡುವುದರ ಜೊತೆಗೆ ಶೀಘ್ರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು ಹಾಗೂ ಲೆಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳನ್ನು ನೀಡಬೇಕು.

ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ವಾಂಗ್ಚುಕ್ ಮತ್ತು ಇತರರನ್ನು ದಿಲ್ಲಿ ಗಡಿಯಲ್ಲಿ ಬಂಧಿಸಲಾಯಿತು. ಬಳಿಕ, ಅವರನ್ನು ಬಾವನ, ನರೇಲ ಕೈಗಾರಿಕಾ ಪ್ರದೇಶ ಮತ್ತು ಅಲಿಪುರ ಪೊಲೀಸ್ ಠಾಣೆಗಳಿಗೆ ಒಯ್ಯಲಾಯಿತು.

► ಲಡಾಖ್‌ನಲ್ಲಿ ಪ್ರತಿಭಟನೆ

ದಿಲ್ಲಿ ಪೊಲೀಸರು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಿರುವುದನ್ನು ವಿರೋಧಿಸಿ ನೂರಾರು ಜನರು ಮಂಗಳವಾರ ಲೇಹ್‌ ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ‘‘ಡೆಲ್ಲಿ ಪೊಲೀಸ್, ಶೇಮ್ ಶೇಮ್’’ ಎಂಬ ಘೋಷಣೆಗಳನ್ನು ಕೂಗಿದರು.

ಲೇಹ್‌ ನಲ್ಲಿ ಮಂಗಳವಾರ ಪುರುಷರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಸೋನಮ್ ವಾಂಗ್ಚುಕ್‌ಗೆ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆ ನಡೆಸಿದರು.

ವಾಂಗ್ಚುಕ್‌ರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಪಾದಯಾತ್ರೆಯನ್ನು ಮುಂದುವರಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News