ಲಡಾಖ್‌ನ ಬೇಡಿಕೆಗಳ ಕುರಿತು ಕ್ರಮಕ್ಕೆ ಕೈಗೊಳ್ಳುವಂತೆ ಪ್ರಧಾನಿಯನ್ನು ಆಗ್ರಹಿಸಿದ ಸೋನಮ್ ವಾಂಗ್ಚುಕ್

Update: 2024-09-09 14:52 GMT

ಸೋನಮ್ ವಾಂಗ್ಚುಕ್ | PC : PTI

ಹೊಸದಿಲ್ಲಿ : ಸ್ಥಳೀಯ ಜನರು ತಮ್ಮ ಭೂಮಿ ಮತ್ತು ಸಾಂಸ್ಕೃತಿಕ ಗುರುತನ್ನು ರಕ್ಷಿಸಿಕೊಳ್ಳಲು ಕಾನೂನು ರೂಪಿಸುವ ಅಧಿಕಾರವನ್ನು ಹೊಂದಿರಲು ಲಡಾಖನ್ನು ಸಂವಿಧಾನದ ಆರನೇ ಅನುಸೂಚಿಯಲ್ಲಿ ಸೇರಿಸುವಂತೆ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಲಡಾಖ್ ನಾಯಕತ್ವದ ಜೊತೆ ಮಾತುಕತೆಗಳನ್ನು ಪುನರಾರಂಭಿಸುವಂತೆ ಕೇಂದ್ರವನ್ನು ಕೋರಲು ವಾಂಗ್ಚುಕ್ ಮತ್ತು ಸುಮಾರು 75 ಸ್ವಯಂಸೇವಕರು ಸೆ.1ರಿಂದ ಲೇಹ್‌ನಿಂದ ದಿಲ್ಲಿಯವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಸೋಮವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಂಗ್ಚುಕ್, ಜುಲೈನಲ್ಲಿ ಕಾರ್ಗಿಲ್ ವಿಜಯ ದಿವಸ್‌ ನ 25ನೇ ವಾರ್ಷಿಕೋತ್ಸವಕ್ಕಾಗಿ ದ್ರಾಸ್‌ಗೆ ಭೇಟಿ ನೀಡಿದ್ದ ಪ್ರಧಾನಿಯವರಿಗೆ ಸಲ್ಲಿಸಿದ್ದ ಬೇಡಿಕೆಗಳ ಜ್ಞಾಪಕ ಪತ್ರಕ್ಕೆ ಉತ್ತರವನ್ನು ತಾನಿನ್ನೂ ಸ್ವೀಕರಿಸಿಲ್ಲ ಎಂದು ಹೇಳಿದರು.

ಲಡಾಖ್‌ನಲ್ಲಿ ಐದು ಹೆಚ್ಚುವರಿ ಜಿಲ್ಲೆಗಳ ರಚನೆಯನ್ನು ತಮ್ಮ ಪ್ರತಿಭಟನೆಯೊಂದಿಗೆ ಪರೋಕ್ಷವಾಗಿ ತಳುಕು ಹಾಕಬಹುದು ಎಂದು ಹೇಳಿದ ಅವರು, ‘ಆದರೂ ಈ ಜಿಲ್ಲೆಗಳಿಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗಿದೆಯೇ ಎನ್ನುವುದು ನಮಗಿನ್ನೂ ತಿಳಿದಿಲ್ಲ. ಅಧಿಕಾರ ನೀಡಿಲ್ಲವಾದರೆ ಅದು ದುರದೃಷ್ಟಕರ ’ ಎಂದರು.

‘ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಲಡಾಖ್ ಕೈಗಾರಿಕೆ ಮತ್ತು ಹವಾಮಾನ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದೆ. ಲಡಾಖ್‌ನ ಜನತೆಯ ಸ್ವಾಯತ್ತತೆಯನ್ನು ಕಾಪಾಡಲು ಅದನ್ನು ಸಂವಿಧಾನದ ಆರನೇ ಅನುಸೂಚಿಗೆ ಸೇರಿಸುವಂತೆ ನಾನು ಪ್ರಧಾನಿಯವರನ್ನು ಆಗ್ರಹಿಸುತ್ತೇನೆ’ಎಂದು ಹೇಳಿದ ವಾಂಗ್ಚುಕ್, ಪಾದಯಾತ್ರೆಯ ಮೂಲಕ ಪ್ರದೇಶದಲ್ಲಿ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮಗಳ ಬಗ್ಗೆ ವಿಶ್ವ ನಾಯಕರು ಮತ್ತು ಜಾಗತಿಕ ಸಮುದಾಯದ ಗಮನವನ್ನು ಸೆಳೆಯುವುದು ತನ್ನ ಉದ್ದೇಶವಾಗಿದೆ ಎಂದರು.

ಸುದ್ದಿಸಂಸ್ಥೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲೇಹ್ ಮತ್ತು ಕಾರ್ಗಿಲ್‌ನ ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಗಳಿಗೆ ಅಭಿವೃದ್ಧಿ ಹಣವನ್ನು ಖರ್ಚು ಮಾಡಲು ಮಾತ್ರ ಅಧಿಕಾರ ನೀಡಲಾಗಿದೆ. ಲಡಾಖ್‌ನ ಜನರು ಕಾನೂನುಗಳನ್ನು ರೂಪಿಸುವ ಅಧಿಕಾರವನ್ನೂ ಬಯಸಿದ್ದಾರೆ ಎಂದು ತಿಳಿಸಿದರು.

ಪಾದಯಾತ್ರೆಯೊಂದೇ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು,‘ಲಡಾಖ್ ಜನರ ಬೇಡಿಕೆಗಳ ಕುರಿತು ಚರ್ಚೆಯನ್ನು ಕೇಂದ್ರವು ಪುನರಾರಂಭಿಸಬೇಕು ಎಂದು ನಾವು ಬಯಸಿದ್ದೇವೆ’ಎಂದು ಹೇಳಿದರು.

ರಾಜಕೀಯಕ್ಕೆ ಸೇರುವ ಯಾವುದೇ ಉದ್ದೇಶವನ್ನು ತಾನು ಹೊಂದಿಲ್ಲ. ಈ ಪಾದಯಾತ್ರೆಗೂ ಅನೇಕ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ವಾಂಗ್ಚುಕ್ ಸ್ಪಷ್ಟಪಡಿಸಿದರು.

ಪರಿಸರ ಸೂಕ್ಷ್ಮ ಪ್ರದೇಶದ ಸಂಪನ್ಮೂಲಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲು ಹವಣಿಸಿರುವ ಕೈಗಾರಿಕೋದ್ಯಮಿಗಳ ಒತ್ತಡದಿಂದಾಗಿ ಕೇಂದ್ರ ಸರಕಾರವು ಲಡಾಖ್‌ಗೆ ಬುಡಕಟ್ಟು ಪ್ರದೇಶ ಮತ್ತು ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ನೀಡುವ ತನ್ನ ಭರವಸೆಯಿಂದ ಹಿಂದೆ ಸರಿದಿದೆ ಎಂದು ವಾಂಗ್ಚುಕ್ ಆರೋಪಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News