ಮಳೆಗೆ ಅನುಗುಣವಾಗಿ ಬಿತ್ತನೆ | ಕರ್ನಾಟಕ, ತಮಿಳುನಾಡಿಗೆ ಕಾವೇರಿ ಸಮಿತಿ ಸೂಚನೆ

Update: 2024-06-15 15:46 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಜೂನ್ ಪೂರ್ವಾರ್ಧದಲ್ಲಿ ಮುಂಗಾರು ಮಳೆಯು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯು, ಮಳೆಗೆ ಅನುಗುಣವಾಗಿ ಬೆಳೆಗಳ ಬಿತ್ತನೆಗೆ ಸಜ್ಜಾಗುವಂತೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳಿಗೆ ಸೂಚಿಸಿದೆ.

ಶುಕ್ರವಾರ ನಡೆದ ಸಮಿತಿಯ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ದೇಶನವನ್ನು ಹೊರಡಿಸಲಾಗಿಲ್ಲ. ಮಳೆಯ ಆರಂಭವು ಸನ್ನಿಹಿತವಾಗಿದ್ದು, 2024-25ನೇ ಜಲವರ್ಷದಲ್ಲಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆಯು ನೀಗಲಿದೆ ಎಂದು ಸಮಿತಿಯು ಅಭಿಪ್ರಾಯಿಸಿದೆ. ಹಿಂದಿನ ಜಲವರ್ಷದಲ್ಲಿ ಜಲಾನಯನ ಪ್ರದೇಶವು ತೀವ್ರ ನೀರಿನ ಕೊರತೆಯನ್ನು ಎದುರಿಸಿತ್ತು.

ಸರ್ವೋಚ್ಚ ನ್ಯಾಯಾಲಯವು ಪರಿಷ್ಕರಿಸಿರುವ ಕಾವೇರಿ ಜಲವಿವಾದಗಳ ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಸಾಮಾನ್ಯ ವರ್ಷದಲ್ಲಿ ಜೂನ್ ತಿಂಗಳಿನಲ್ಲಿ ತಮಿಳುನಾಡಿನ ಬಿಳಿಗುಂಡ್ಲು ಜಲಾಶಯದಲ್ಲಿ 9.19 ಟಿಎಂಸಿ, ಅಂದರೆ ಸುಮಾರು 3,550 ಕ್ಯುಸೆಕ್ಸ್ ನೀರಿನ ಸಂಗ್ರಹವನ್ನು ಕರ್ನಾಟಕವು ಖಚಿತಪಡಿಸಬೇಕಿದೆ.

ಕೇವಲ 1.316 ಟಿಎಂಸಿ ನೀರನ್ನು ಸ್ವೀಕರಿಸಲಾಗಿದ್ದು, 2.054 ಟಿಎಂಸಿ ನೀರಿನ ಬಿಡುಗಡೆ ಇನ್ನೂ ಬಾಕಿಯಿದೆ ಎಂದು ತಮಿಳುನಾಡು ಅಧಿಕಾರಿಗಳು ಸಮಿತಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News