ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿರುವ ಶ್ರೀಲಂಕಾ ಅಧ್ಯಕ್ಷ, ಬಾಂಗ್ಲಾ ಪ್ರಧಾನಿ
ಹೊಸದಿಲ್ಲಿ: ಜೂನ್ 8ರಂದು ನಡೆಯಲಿದೆ ಎಂದು ಹೇಳಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪಾಲ್ಗೊಳ್ಳಲಿದ್ದಾರೆ ಎಂದು The Times of India ವರದಿ ಮಾಡಿದೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಬಹುಮತ ಪಡೆಯುವಲ್ಲಿ ವಿಫಲಗೊಂಡಿರುವ ಬಿಜೆಪಿ, ಕೇವಲ 240 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೆ ಶಕ್ತವಾಗಿದೆ. ಇದೇ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 292 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂಲಕ ಸರಳ ಬಹುಮತ ಗಳಿಸಿದೆ.
ಇದಕ್ಕೂ ಮುನ್ನ, ಸತತ ಮೂರನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಅಭಿನಂದಿಸಿದ್ದರು. "ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ನಾಯಕರಾಗುವ ಮೂಲಕ ನೀವು ಭಾರತದ ಜನತೆಯ ಭರವಸೆಗಳು ಹಾಗೂ ಬಯಕೆಗಳನ್ನು ಹೊತ್ತೊಯ್ಯುತ್ತಿದ್ದೀರಿ" ಎಂದು ಅವರು ಹೇಳಿದ್ದಾರೆ ಎಂದು ಅವರ ಪಕ್ಷವು ಬುಧವಾರ ಪ್ರಕಟಿಸಿತ್ತು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಲು ಕರೆ ಮಾಡಿದ್ದ ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಅವರಿಗೆ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮೋದಿ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದ್ದು, ಶ್ರೀಲಂಕಾ ಅಧ್ಯಕ್ಷರು ಈ ಆಹ್ವಾನವನ್ನು ಅಂಗೀಕರಿಸಿದ್ದಾರೆ ಎನ್ನಲಾಗಿದೆ.