ವಿಮಾನದಲ್ಲಿ ತಾರಕಕ್ಕೇರಿದ ಪತಿ-ಪತ್ನಿ ಜಗಳ; ಬ್ಯಾಂಕಾಕ್‌ಗೆ ತೆರಳುತ್ತಿದ್ದ ವಿಮಾನ ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ

Update: 2023-11-29 13:14 GMT

ಲುಫ್ತಾನ್ಸಾ ಏರ್‌ಲೈನ್ಸ್‌ | Photo: NDTV 

ಹೊಸದಿಲ್ಲಿ: ಮ್ಯೂನಿಚ್‌ನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನವೊಂದು ಬುಧವಾರ ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇದಕ್ಕೆ ಕಾರಣ ತಾಂತ್ರಿಕ ದೋಷವೆಂದು ಅಂದುಕೊಂಡರೆ ಅದು ತಪ್ಪು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಪರಸ್ಪರ ಜಗಳವಾಡಿಕೊಂಡು ಆ ಜಗಳ ತಾರಕಕ್ಕೇರಿದ್ದರಿಂದ ಪೈಲಟ್‌ ಅನಿವಾರ್ಯವಾಗಿ ವಿಮಾನವನ್ನು ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಬೇಕಾಗಿ ಬಂತು.

ವಿಮಾನ ಪ್ರಯಾಣಿಕರಾಗಿದ್ದ ಜರ್ಮನ್‌ ವ್ಯಕ್ತಿ ಮತ್ತು ಆತನ ಥಾಯ್‌ ಪತ್ನಿ ನಡುವೆ ಜಗಳ ಆರಂಭಗೊಂಡಿತ್ತು. ಕೊನೆಗೆ ಮಹಿಳೆ ಪೈಲಟ್‌ ಅನ್ನು ಸಂಪರ್ಕಿಸಿ ಗಂಡನ ನಡವಳಿಕೆಯಿಂದ ಭಯವಾಗಿದೆ ಎಂದು ಹೇಳಿಕೊಂಡರು.

ಪೈಲಟ್‌ ಬೇರೆ ದಾರಿ ಕಾಣದೆ ಮೊದಲು ಪಾಕ್‌ ವಿಮಾನ ನಿಲ್ದಾಣದಲ್ಲಿ ಇಳಿಸಲು ಅನುಮತಿ ಕೋರಿದ್ದರೂ ಅಲ್ಲಿ ಅನುಮತಿ ದೊರೆಯದೇ ಇದ್ದ ಕಾರಣ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಬಂದಿಳಿದ ತಕ್ಷಣ ಮಹಿಳೆಯ ಪತಿಯನ್ನು ಭದ್ರತಾ ಸಿಬ್ಬಂದಿಗಳಿಗೊಪ್ಪಿಸಲಾಯಿತು. ಆತ ತನ್ನ ವರ್ತನೆಗೆ ಕ್ಷಮೆ ಕೋರಿದ್ದಾನೆಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಜರ್ಮನಿ ದೂತಾವಾಸವನ್ನೂ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಆ ವ್ಯಕ್ತಿಯನ್ನು ಜರ್ಮನಿಗೆ ವಾಪಸ್‌ ಕಳಿಸಬೇಕೇ ಬೇಡವೇ ಎಂಬ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News