ಅಯೋಧ್ಯೆಯಲ್ಲಿ 50 ಲಕ್ಷ ಮೌಲ್ಯದ ಬೀದಿ ದೀಪಗಳು ನಾಪತ್ತೆ!

Update: 2024-08-14 02:51 GMT

PC: x.com/indiatv

ಅಯೋಧ್ಯೆ: ದೇಗುಲ ನಗರದ ರಾಮ ಪಥದಲ್ಲಿ ಮರಗಳಿಗೆ ಅಳವಡಿಸಿದ್ದ 3800 ಬಿದಿರು ದೀಪಗಳು ಮತ್ತು ಭಕ್ತಿಪಥದಲ್ಲಿ ಅಳವಡಿಸಿದ್ದ 36 ಗೊಬೊ ಪ್ರಾಜೆಕ್ಟರ್ ದೀಪಗಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ದೀಪಗಳು ಕಳ್ಳತನವಾಗಿರುವ ಬಗ್ಗೆ ಗುತ್ತಿಗೆದಾರರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ನೀಡಿದ ಗುತ್ತಿಗೆಯ ಮೇರೆಗೆ ಯಶ್ ಎಂಟರ್ ಪ್ರೈಸಸ್ ಹಾಗೂ ಕೃಷ್ಣ ಅಟೋಮೊಬೈಲ್ಸ್ ಎಂಬ ಸಂಸ್ಥೆಗಳು ರಾಮಪಥದಲ್ಲಿ 6400 ಬಿದಿರು ದೀಪಗಳು ಮತ್ತು ಭಕ್ತಿಪಥದಲ್ಲಿ 96 ಗೊಬೊ ಪ್ರಾಜೆಕ್ಟರ್ ಲೈಟ್ ಅಳವಡಿಸಿದ್ದವು. ಆದರೆ ಈ ಪೈಕಿ 3800 ಬಿದಿರು ದೀಪಗಳು ಮತ್ತು 36 ಗೊಬೊ ಪ್ರಾಜೆಕ್ಟರ್ ಲೈಟ್ಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿ ಶೇಖರ್ ಶರ್ಮಾ ಹೇಳಿದ್ದಾರೆ.

ರಾಮಪಥ ಹಾಗೂ ಭಕ್ತಿಪಥದಲ್ಲಿ ಅಳವಡಿಸಿದ್ದ ಎಲ್ಲ ದೀಪಗಳು ಮಾರ್ಚ್ 19ರವರೆಗೂ ಇದ್ದವು. ಆದರೆ ಮೇ 9 ರಂದು ತಪಾಸಣೆ ಮಾಡಿದಾಗ ಕೆಲ ದೀಪಗಳು ಕಾಣೆಯಾಗಿದ್ದವು. ಅಪರಿಚಿತ ಕಳ್ಳರು ಒಟ್ಟು 3600 ಬಿದಿರು ದೀಪಗಳು ಮತ್ತು 36 ಗೊಬೊ ಪ್ರಾಜೆಕ್ಟರ್ ಲೈಟ್ಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮೇ ತಿಂಗಳಲ್ಲೇ ದೀಪಗಳು ಕಾಣೆಯಾಗಿರುವುದು ಗಮನಕ್ಕೆ ಬಂದರೂ, ಸಂಸ್ಥೆ ಆಗಸ್ಟ್ 9ರವರೆಗೆ ಏಕೆ ದೂರು ನೀಡಿಲ್ಲ ಎನ್ನುವ ಪ್ರಶ್ನೆ ಉದ್ಭವಿಸಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News