"ಮುಸ್ಲಿಂ ಶಿಕ್ಷಕರ ಬಗ್ಗೆ ಸುಳ್ಳು ಹೇಳಿಕೆ ನೀಡಲು ಒತ್ತಡ": ಒಪ್ಪಿಕೊಂಡ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2024-02-27 11:10 GMT

ಕೋಟಾ: ಬಲವಂತದ ಮತಾಂತರ, ಲವ್‌ ಜಿಹಾದ್‌ ಚಟುವಟಿಕೆಗಳನ್ನು ನಡೆಸುತ್ತಿದ್ಧಾರೆಂದು ಹಿಂದುತ್ವ ಗುಂಪು ʼಸರ್ವ್‌ ಹಿಂದು ಸಮಾಜ್‌ʼ ಆರೋಪಗಳ ನಂತರ ರಾಜಸ್ಥಾನದ ಕೋಟಾ ಎಂಬಲ್ಲಿನ ಖಜೂರಿ ಗ್ರಾಮದ ಶಾಲೆಯೊಂದರ ಮೂವರು ಮುಸ್ಲಿಂ ಶಿಕ್ಷಕರಾದ ಫಿರೋಝ್‌ ಖಾನ್‌, ಮಿರ್ಜಾ ಮುಜಾಹಿದ್‌ ಮತ್ತು ಶಬಾನಾ ಎಂಬವರನ್ನು ಅಮಾನತುಗೊಳಿಸಲಾಗಿತ್ತು. ಆದರೆ ಈ ಶಾಲೆಯ ಹಿಂದೂ ವಿದ್ಯಾರ್ಥಿಗಳು ಶಿಕ್ಷಕರ ಅಮಾನತನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರಲ್ಲದೆ ಶಾಲೆಯಿಂದ ಹಲವಾರು ಕಿಮೀ ದೂರವಿರವ ಸಂಗೋಡ್‌ ಪಟ್ಟಣದಲ್ಲಿರುವ ಎಸ್‌ಡಿಎಂ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಅಮಾನತುಗೊಂಡ ಮುಸ್ಲಿಂ ಶಿಕ್ಷಕರ ಮರುಸ್ಥಾಪನೆಗೆ ಕೋರಿದರು.

ಶಿಕ್ಷಕರ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ವಿದ್ಯಾರ್ಥಿಗಳು, ಅವರ ಮೇಲೆ ಸುಳ್ಳು ಆರೋಪ ಹೊರಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನೆ ವೇಳೆ ಭಾವುಕರಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮಗೆ ಶಿಕ್ಷಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಬಲವಂತಪಡಿಸಲಾಗಿತ್ತು ಎಂದೂ ಹೇಳಿದ್ದಾರೆ.

10ನೇ ಗ್ರೇಡ್‌ ವಿದ್ಯಾರ್ಥಿಯೊಬ್ಬ ಪ್ರತಿಕ್ರಿಯಿಸಿ ನನಗೆ ನಮಾಝ್‌ ಸಲ್ಲಿಸಲು ಬಲವಂತಪಡಿಸಲಾಗಿರಲಿಲ್ಲ ಆದರೂ ಮುಸ್ಲಿಂ ಶಿಕ್ಷಕರ ವಿರುದ್ಧ ಸುಳ್ಳು ಆರೋಪ ಹೊರಿಸಲು ಬಲವಂತಪಡಿಸಲಾಗಿತ್ತು ಎಂದು ಹೇಳಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಈ ವಿದ್ಯಾರ್ಥಿಯ ಮಾತುಗಳು ಕೇಳಿಸುತ್ತವೆ – “ನೀನು ಹಿಂದೂ ಎಂದು ಅವರ ಸತತವಾಗಿ ನೆನಪಿಸುತ್ತಿದ್ದರು. ಅವರ ಮಾತುಗಳನ್ನು ಕೇಳಿ ನಾನು ತಪ್ಪು ಮಾಡಿದೆ. ಈ ಶಿಕ್ಷಕರು ನಮ್ಮವರು. ಅವರ ಬಗ್ಗೆ ಏಕೆ ಸುಳ್ಳು ಹೇಳಲಿ? ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ಅವರು ಕಾರಣರು,” ಎಂದು ಆತ ಹೇಳಿದ್ದಾನೆ.

ಬಲವಂತದ ಮತಾಂತರ, ‌ʼಲವ್‌ ಜಿಹಾದ್‌ʼ ಮತ್ತು ನಮಾಝ್ ಚಟುವಟಿಕೆಗಳನ್ನು ಅಮಾನತುಗೊಂಡ ಶಿಕ್ಷಕರು ನಡೆಸಿಲ್ಲ ಎಂದು ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಜಿಲ್ಲಾ ಶಿಕ್ಷಣ ಇಲಾಖೆಗೆ ಶಾಲೆಯ 15 ಹಿಂದೂ ಶಿಕ್ಷಕರು ಪತ್ರ ಬರೆದಿದ್ದಾರೆ. ಶಾಲೆಯ ಆಡಳಿತ ಸಮಿತಿ, ಸ್ಥಳೀಯ ಗ್ರಾಮ ಸರಪಂಚ ಕೂಡ ಶಿಕ್ಷಕರ ವಿರುದ್ಧದ ಆರೋಪ ನಿರಾಕರಿಸಿದ್ದಾರೆ.

ಸ್ಥಳೀಯ ಹಿಂದು ಮಹಿಳೆ ಹಾಗೂ ಮುಸ್ಲಿಂ ವ್ಯಕ್ತಿಯ ನಡುವಿನ ಪ್ರೇಮ ವಿವಾಹಕ್ಕೂ ಈ ವಿವಾದಕ್ಕೂ ನಂಟು ಇರುವಂತೆ ತೋರುತ್ತಿದೆ. ಆದರೆ ಈ ಪ್ರಕರಣದಲ್ಲಿ ಇಬ್ಬರೂ ವಯಸ್ಕರಾಗಿದ್ದು ತಮ್ಮ ಸ್ವಇಚ್ಛೆಯಂತೆ ವಿವಾಹವಾಗಿದ್ದಾರೆ ಎಂದು ಸ್ಥಳೀಯರು ಮತ್ತು ಪೊಲೀಸರು ಹೇಳಿದ್ದಾರೆ. ಶಾಲೆಯ ಪ್ರದೇಶದಲ್ಲಿ ಯಾವತ್ತೂ ಬಲವಂತದ ಮತಾಂತರ ಅಥವಾ ಲವ್‌ ಜಿಹಾದ್‌ ನಡೆದಿಲ್ಲ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News