ಗಣಿಗಾರಿಕೆ ಮೇಲೆ ಪೂರ್ವಾನ್ವಯವಾಗಿ ತೆರಿಗೆ ವಿಧಿಸಲು ರಾಜ್ಯಗಳಿಗೆ ಸುಪ್ರೀಂ ಅನುಮತಿ

Update: 2024-08-14 15:03 GMT

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ : ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅನುಮತಿ ನೀಡಿರುವ ತನ್ನ ಜು.25ರ ತೀರ್ಪು 2005,ಎ.1ರಿಂದ ನಡೆದಿರುವ ವಹಿವಾಟುಗಳಿಗೆ ಪೂರ್ವಾನ್ವಯಗೊಳ್ಳುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಸ್ಪಷ್ಟಪಡಿಸಿದೆ.

ಸಾರ್ವಜನಿಕ ವಲಯದ ಕಂಪನಿಗಳಿಗೆ ವಾಣಿಜ್ಯಿಕ ನಷ್ಟವನ್ನು ತಪ್ಪಿಸಲು ತೀರ್ಪನ್ನು ಪೂರ್ವಾನ್ವಯಗೊಳಿಸಬಾರದು ಎಂಬ ಕೇಂದ್ರ ಮತ್ತು ಗಣಿ ಕಂಪನಿಗಳ ವಾದಗಳನ್ನು ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಹೃಷಿಕೇಶ್ರಾಯ್, ಅಭಯ ಎಸ್.ಓಕಾ, ಬಿ.ವಿ.ನಾಗರತ್ನಾ, ಜೆ.ಬಿ.ಪರ್ದಿವಾಲಾ, ಮನೋಜ ಮಿಶ್ರಾ, ಉಜ್ಜಲ ಭುಯಾನ್, ಸತೀಶಚಂದ್ರ ಶರ್ಮಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ತಿರಸ್ಕರಿಸಿತು.

ಗಣಿ ನಿರ್ವಾಹಕರು ಕೇಂದ್ರಕ್ಕೆ ಪಾವತಿಸುವ ರಾಯಧನವು ತೆರಿಗೆಯಲ್ಲ, ಆದ್ದರಿಂದ ಗಣಿಗಾರಿಕೆ ಮತ್ತು ಖನಿಜ ಬಳಕೆ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಹಕ್ಕನ್ನು ರಾಜ್ಯಗಳು ಹೊಂದಿವೆ ಎಂದು ಪೀಠವು ತನ್ನ ಜು.25ರ ತೀರ್ಪಿನಲ್ಲಿ ಹೇಳಿತ್ತು.

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ ) ಕಾಯ್ದೆಯಡಿ ಗಣಿಗಳು ಮತ್ತು ಖನಿಜಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ತೆರಿಗೆ ವಿಧಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆಯೇ ಎನ್ನುವುದು ಸರ್ವೋಚ್ಚ ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು.

ನ್ಯಾ.ಬಿ.ವಿ.ನಾಗರತ್ನಾ ಅವರು ಬಹುಮತದ ತೀರ್ಪಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು, ಹೀಗಾಗಿ ಅವರು ಬುಧವಾರದ ತೀರ್ಪಿಗೆ ಸಹಿ ಹಾಕಲಿಲ್ಲ.

ಪೂರ್ವಾನ್ವಯವಾಗಲಿರುವ ತೆರಿಗೆ ಬೇಡಿಕೆಯನ್ನು 2026, ಎ.1ರಿಂದ 12 ವರ್ಷಗಳ ಅವಧಿಯಲ್ಲಿ ಕಂತುಗಳಲ್ಲಿ ಪಾವತಿಸಬಹುದು ಎಂದು ಬುಧವಾರದ ತನ್ನ ತೀರ್ಪಿನಲ್ಲಿ ಹೇಳಿದ ನ್ಯಾಯಾಲಯವು, 2024 ಜು.25ರ ಮೊದಲಿನ ತೆರಿಗೆ ಬೇಡಿಕೆಗೆ ಬಡ್ಡಿ ಅಥವಾ ದಂಡವನ್ನು ವಿಧಿಸುವಂತಿಲ್ಲ ಎಂದು ತಿಳಿಸಿತು.

ರಾಯಧನವು ತೆರಿಗೆಯಲ್ಲ ಎಂದು ಜು.25ರಂದು ಸ್ಪಷ್ಟಪಡಿಸಿದ್ದ ನ್ಯಾ.ಚಂದ್ರಚೂಡ್ ಅವರು,‘ರಾಯಧನವು ತೆರಿಗೆಯಾಗಿದೆ ಎಂಬ ಇಂಡಿಯಾ ಸಿಮೆಂಟ್ಸ್ ತೀರ್ಪಿನಲ್ಲಿಯ ಅವಲೋಕನವು ತಪ್ಪು ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ. ಸರಕಾರಕ್ಕೆ ಪಾವತಿಯಾಗಬೇಕಿರುವ ಬಾಕಿಯನ್ನು ವಸೂಲು ಮಾಡಲು ಕಾಯ್ದೆಯು ಅವಕಾಶವನ್ನು ನೀಡಿದೆ ಎಂಬ ಮಾತ್ರಕ್ಕೆ ಸರಕಾರಕ್ಕೆ ಮಾಡಿದ ಪಾವತಿಗಳನ್ನು ತೆರಿಗೆಯೆಂದು ಪರಿಗಣಿಸುವಂತಿಲ್ಲ’ಎಂದು ಹೇಳಿದ್ದರು. ಆದ್ದರಿಂದ ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಅಧಿಕಾರವನ್ನು ರಾಜ್ಯಗಳು ಹೊಂದಿವೆ ಎಂದು ಪೀಠದ ಎಂಟು ನ್ಯಾಯಾಧೀಶರು ಹೇಳಿದ್ದರು.

1989ರಲ್ಲಿ ಇಂಡಿಯಾ ಸಿಮೆಂಟ್ಸ್ ಮತ್ತು ತಮಿಳುನಾಡು ಸರಕಾರವನ್ನು ಒಳಗೊಂಡಿದ್ದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು, ಗಣಿ ಕಾಯ್ದೆಯ ಪ್ರಕಾರ ರಾಯಧನವು ಒಂದು ರೀತಿಯ ತೆರಿಗೆಯಾಗಿದೆ. ಹೀಗಾಗಿ ಇಂತಹ ರಾಯಧನಗಳ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲ ಎಂದು ಹೇಳಿತ್ತು.

2004ರಲ್ಲಿ ಕೇಸೊರಾಮ್ ಇಂಡಸ್ಟ್ರೀಸ್ ಮತ್ತು ಪ.ಬಂಗಾಳ ಸರಕಾರವನ್ನು ಒಳಗೊಂಡಿದ್ದ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಪೀಠವು,1989ರ ಪೀಠದ ತೀರ್ಪಿನಲ್ಲಿ ಟೈಪಿಂಗ್ ದೋಷವಿತ್ತು ಮತ್ತು ರಾಯಧನದ ಮೇಲಿನ ಸೆಸ್ ಮಾತ್ರ ಒಂದು ರೀತಿಯ ತೆರಿಗೆಯಾಗಿದೆ,ರಾಯಧನವಲ್ಲ ಎನ್ನುವುದು ತೀರ್ಪಿನ ಅರ್ಥವಾಗಿತ್ತು ಎಂದು ಹೇಳಿತ್ತು.

1989 ಮತ್ತು 2004ರ ತೀರ್ಪುಗಳ ನಡುವೆ ಮೇಲ್ನೋಟಕ್ಕೆ ಸಂಘರ್ಷವಿದೆ ಎಂದು 2011ರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ತ್ರಿಸದಸ್ಯ ಪೀಠವು, ಪ್ರಕರಣವನ್ನು ಒಂಭತ್ತು ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News