ಇಸ್ರೇಲ್ ಗೆ ಶಸ್ತ್ರಾಸ್ತ್ರಗಳ ಪೂರೈಕೆ ಸ್ಥಗಿತಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಕೆ
ಹೊಸದಿಲ್ಲಿ: ಗಾಝಾದಲ್ಲಿ ಯುದ್ಧದಲ್ಲಿ ತೊಡಗಿರುವ ಇಸ್ರೇಲ್ ಗೆ ಶಸ್ತ್ರಾಸ್ತ್ರಗಳು ಹಾಗೂ ಸೇನಾ ಸಾಮಗ್ರಿಗಳನ್ನು ಪೂರೈಸಲು ನೀಡಿರುವ ಪರವಾನಗಿಯನ್ನು ರದ್ದುಪಡಿಸಬೇಕು ಹಾಗೂ ಹೊಸ ಪರವಾನಗಿಯನ್ನು ಮಂಜೂರು ಮಾಡಬಾರದು ಎಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ರಕ್ಷಣಾ ಸಚಿವಾಲಯವನ್ನು ಪ್ರತಿವಾದಿಯನ್ನಾಗಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೂಲಕ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, “ಯುದ್ಧಾಪರಾಧಗಳಲ್ಲಿ ತೊಡಗಿರುವ ದೇಶಗಳಿಗೆ ಸೇನಾ ಶಸ್ತ್ರಾಸ್ತ್ರಗಳನ್ನು ಪೂರೈಸಕೂಡದು ಎಂಬ ಹಲವಾರು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳಿಗೆ ಭಾರತ ಬದ್ಧವಾಗಿದ್ದು, ಹಾಗೆ ಮಾಡುವುದು ಅಂತಾರಾಷ್ಟ್ರೀಯ ಮಾನವ ಹಕ್ಕು ಕಾನೂನುಗಳ ಗಂಭೀರ ಉಲ್ಲಂಘನೆಯಾಗಲಿದೆ” ಎಂದು ವಾದಿಸಲಾಗಿದೆ.
ನೊಯ್ಡಾದ ನಿವಾಸಿ ಅಶೋಕ್ ಕುಮಾರ್ ಶರ್ಮ ಸೇರಿದಂತೆ 11 ಮಂದಿ ಸಲ್ಲಿಸಿರುವ ಅರ್ಜಿಯಲ್ಲಿ, ರಕ್ಷಣಾ ಸಚಿವಾಲಯದಡಿ ಸಾರ್ವಜನಿಕ ಉದ್ಯಮಗಳು ಸೇರಿದಂತೆ ಇನ್ನಿತರ ಕಂಪನಿಗಳು ಇಸ್ರೇಲ್ ಗೆ ಸೇನಾ ಸಾಮಗ್ರಿಗಳನ್ನು ಪೂರೈಸುವುದು ಭಾರತವು ಬದ್ಧವಾಗಿರುವ ಅಂತಾರಾಷ್ಟ್ರೀಯ ಕಾನೂನುಗಳು ಹಾಗೂ ಸಂವಿಧಾನದ ವಿಧಿ 14 ಮತ್ತು ವಿಧಿ 21ರ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
“ಪ್ರತಿವಾದಿಗಳಿಗೆ ಯಾವುದಾದರೂ ಸೂಕ್ತ ನಿರ್ದೇಶನ ನೀಡುವ ಮೂಲಕ ಭಾರತ ಸರಕಾರದ ವಿವಿಧ ಅಂಗಗಳ ಮೂಲಕ ಇಸ್ರೇಲ್ ಗೆ ಸೇನಾ ಸಾಮಗ್ರಿಗಳನ್ನು ಪೂರೈಸಲು ಭಾರತದಲ್ಲಿನ ವಿವಿಧ ಕಂಪನಿಗಳು ಪಡೆದಿರುವ ಪರವಾನಗಿಗಳನ್ನು ರದ್ದುಗೊಳಿಸಬೇಕು ಹಾಗೂ ಹೊಸ ಪರವಾನಗಿಗಳನ್ನು ಸ್ಥಗಿತಗೊಳಿಸಬೇಕು” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.