"ಯಾವುದೇ ಧರ್ಮವು ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ": ಪಟಾಕಿ ನಿಷೇಧ ಉಲ್ಲಂಘನೆ ಕುರಿತು ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದಿಲ್ಲಿ ಪೋಲಿಸರನ್ನು ಸೋಮವಾರ ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ನಗರದಲ್ಲಿ ಪಟಾಕಿಗಳ ಮಾರಾಟ ಮತ್ತು ಸಿಡಿಸುವುದನ್ನು ನಿಲ್ಲಿಸಲು ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿತು. ಯಾವುದೇ ಧರ್ಮವು ಮಾಲಿನ್ಯವನ್ನು ಪೋತ್ಸಾಹಿಸುವುದಿಲ್ಲ ಎಂದು ಕಟುವಾಗಿ ಹೇಳಿತು.
ದಿಲ್ಲಿಯ ವಾರ್ಷಿಕ ವಾಯು ಗುಣಮಟ್ಟ ಬಿಕ್ಕಟ್ಟು ಕುರಿತು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎ.ಜಿ.ಮಸಿಹ್ ಅವರ ಪೀಠವು, ಮಾಲಿನ್ಯವನ್ನುಂಟು ಮಾಡುವ ಯಾವುದೇ ಚಟುವಟಿಕೆಯನ್ನು ಯಾವುದೇ ಧರ್ಮವು ಪ್ರೋತ್ಸಾಹಿಸುವುದಿಲ್ಲ. ಈ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸಿದರೆ ಅದು ನಾಗರಿಕರ ಆರೋಗ್ಯದ ಮೂಲಭೂತ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿತು.
ನಗರದಲ್ಲಿ ಪಟಾಕಿಗಳನ್ನು ಶಾಶ್ವತವಾಗಿ ನಿಷೇಧಿಸುವ ಕುರಿತು ನ.25ರೊಳಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ದಿಲ್ಲಿ ಸರಕಾರವನ್ನೂ ಆಗ್ರಹಿಸಿತು.
ಕಳೆದ ವಾರ ವಿಚಾರಣೆ ಸಂದರ್ಭದಲ್ಲಿ ದಿಲ್ಲಿ ಸರಕಾರ ಮತ್ತು ಪೋಲಿಸರಿಗೆ ಛೀಮಾರಿ ಹಾಕಿದ್ದ ಸರ್ವೋಚ್ಚ ನ್ಯಾಯಾಲಯವು ಪಟಾಕಿಗಳ ಮೇಲಿನ ನಿಷೇಧವನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದು ಏಕೆ ಎನ್ನುವುದನ್ನು ವಿವರಿಸುವಂತೆ ಅವುಗಳಿಗೆ ನೋಟಿಸ್ ಹೊರಡಿಸಿತ್ತು.
ಸೋಮವಾರ ಇಲಾಖೆಯು ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ದಿಲ್ಲಿ ಪೋಲಿಸ್ ಮುಖ್ಯಸ್ಥರು ಅಫಿಡವಿಟ್ ಸಲ್ಲಿಸಿದರಾದರೂ ನ್ಯಾಯಾಲಯವು ಅದರಿಂದ ಪ್ರಭಾವಿತಗೊಳ್ಳಲಿಲ್ಲ.
ದಿಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿಯ ಮೇಲಿನ ನಿಷೇಧವನ್ನು ಜಾರಿಗೊಳಿಸಿರಲೇ ಇಲ್ಲ ಎಂಬ ವ್ಯಾಪಕ ವರದಿಗಳಿವೆ ಎಂದು ಕಳೆದ ವಾರ ಹೇಳಿದ್ದ ನ್ಯಾಯಾಲಯವು,ಅ.14ರ ನಂತರ ಪೋಲಿಸರು ಪಟಾಕಿಗಳ ಮಾರಾಟವನ್ನು ನಿಲ್ಲಿಸಿದ್ದರೇ ಎಂದು ಸೋಮವಾರ ಪ್ರಶ್ನಿಸಿತು. ಇದಕ್ಕೆ ಪೋಲಿಸರು ಹೌದು ಎಂದು ಉತ್ತರಿಸಿದರಾದರೂ,ಅದನ್ನು ತಳ್ಳಿಹಾಕಿದ ನ್ಯಾಯಾಲಯವು ‘ಇದೆಲ್ಲ ಕಣ್ಣೊರೆಸುವ ತಂತ್ರ’ ಎಂದು ಕುಟುಕಿತು.
ನಿಷೇಧದ ಅಧಿಸೂಚನೆಯನ್ನು ತಡವಾಗಿ ಹೊರಡಿಸಲಾಗಿತ್ತು ಎಂದು ಪೋಲಿಸರು ದೂರಿಕೊಂಡಾಗ ನ್ಯಾಯಾಲಯವು ಆ ಬಗ್ಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲಿಲ್ಲ.
‘ಪೋಲಿಸರು ನಿಷೇಧ ಆದೇಶದ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಪಟಾಕಿಗಳ ತಯಾರಕರಿಗೆ ಮತ್ತು ಮಾರಾಟಗಾರರಿಗೆ ನಿಷೇಧದ ಆದೇಶದ ಬಗ್ಗೆ ತಿಳಿಸಲಾಗಿತ್ತು ಎನ್ನುವುದನ್ನು ತೋರಿಸುವ ಯಾವುದೂ ಅಫಿಡವಿಟ್‌ನಲ್ಲಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ,ನಿಷೇಧದ ಬಗ್ಗೆ ಸಂಬಂಧಿಸಿದ ಎಲ್ಲರಿಗೂ ತಿಳಿಸುವಂತೆ ಮತ್ತು ನಿಷೇಧದ ಅವಧಿಯಲ್ಲಿ ತಯಾರಕರು ಪಟಾಕಿಗಳನ್ನು ದಾಸ್ತಾನಿರಿಸುವುದಲ್ಲ ಅಥವಾ ಮಾರಾಟ ಮಾಡುವುದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವಂತೆ ಪೋಲಿಸ್ ಆಯುಕ್ತರಿಗೆ ನಿರ್ದೇಶನ ನೀಡಿತು.
ದಿಲ್ಲಿ ಸರಕಾರವನ್ನೂ ನ್ಯಾಯಾಲಯವು ಬಿಡಲಿಲ್ಲ,ಪಟಾಕಿ ನಿಷೇಧದ ಅಧಿಸೂಚನೆಯನ್ನು ವಿಳಂಬಿಸಿದ್ದಕ್ಕಾಗಿ ಅದನ್ನೂ ತರಾಟೆಗೆತ್ತಿಕೊಂಡಿತು.