ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕಾನೂನು ಕುರಿತು ತೀರ್ಪಿನ ಮರುಪರಿಶೀಲನೆ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಸಮ್ಮತಿ
ಹೊಸದಿಲ್ಲಿ: ತಮಿಳುನಾಡಿನಲ್ಲಿ ಗೂಳಿ ಪಳಗಿಸುವ ‘ಜಲ್ಲಿಕಟ್ಟು’ಕ್ರೀಡೆಗೆ ಅವಕಾಶ ನೀಡಲು ರಾಜ್ಯದ ಕಾನೂನಿನಲ್ಲಿ ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ತನ್ನ 2023ರ ತೀರ್ಪಿನ ಪುನರ್ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುವುದನ್ನು ಪರಿಗಣಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಒಪ್ಪಿಕೊಂಡಿದೆ.
ಈ ಸಂಬಂಧ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಅವರು ಮಾಡಿಕೊಂಡ ನಿವೇದನೆಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಗಮನಕ್ಕೆ ತೆಗೆದುಕೊಂಡಿತು.
ನ್ಯಾ.ಕೆ.ಎಂ.ಜೋಸೆಫ್ (ಈಗ ನಿವೃತ್ತ) ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಕಳೆದ ವರ್ಷದ ಮೇ 18ರಂದು ಜಲ್ಲಿಕಟ್ಟು,ಎತ್ತಿನ ಗಾಡಿಗಳ ಸ್ಪರ್ಧೆ ಮತ್ತು ಕಂಬಳಕ್ಕೆ ಅವಕಾಶ ಕಲ್ಪಿಸಿದ್ದ ತಮಿಳುನಾಡು,ಮಹಾರಾಷ್ಟ್ರ ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆಗಳ ಸಿಂಧುತ್ವವನ್ನು ಎತ್ತಿಹಿಡಿದು ಸರ್ವಾನುಮತದ ತೀರ್ಪನ್ನು ನೀಡಿತ್ತು.
ಜಲ್ಲಿಕಟ್ಟು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಅಂಗವಾಗಿ ನಡೆಯುವ ಕ್ರೀಡೆಯಾಗಿದೆ.