ದಿಲ್ಲಿಯ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅಧಿಕಾರವಧಿ ವಿಸ್ತರಣೆಗೆ ಸುಪ್ರೀಂಕೋರ್ಟ್ ಅಸ್ತು ; ಆಪ್ ಸರಕಾರಕ್ಕೆ ಹಿನ್ನಡೆ
ಹೊಸದಿಲ್ಲಿ: ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರ ಅಧಿಕಾರಾವಧಿಯನ್ನು ಆರು ತಿಂಗಳುಗಳವರೆಗೆ ವಿಸ್ತರಿಸುವ ಕೇಂದ್ರ ಸರಕಾರದ ಪ್ರಸ್ತಾವನೆಗೆ ಸುಪ್ರೀಂಕೋರ್ಟ್ ಹಸಿರುನಿಶಾನೆ ತೋರಿಸಿದ್ದು, ಆಡಳಿತಾರೂಢ ಆಮ್ ಆದ್ಮಿ ಸರಕಾರಕ್ಕೆ ಹಿನ್ನಡೆಯುಂಟಾಗಿದೆ. ನರೇಶ್ ಕುಮಾರ್ ಅವರು ಮುಂದಿನ 24 ತಾಸುಗಲ್ಲಿ ನಿವೃತ್ತಿಗೊಳ್ಳಲಿದ್ದರು.
ನರೇಶ್ ಕುಮಾರ್ ಅವರ ಅಧಿಕಾರಾವಧಿಯ ವಿಸ್ತರಣೆಯನ್ನು ದಿಲ್ಲಿ ಸರಕಾರ ವಿರೋಧಿಸಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಅಧಿಕಾರಿಗಳ ನಿಯೋಜನೆಗೆ ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುವ ಸುಗ್ರೀವಾಜ್ಞೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತಿದೆ. ಆದುದರಿಂದ ಕೇಂದ್ರ ಸರಕಾರಕ್ಕೆ ವಿಶೇಷವಾಗಿ ಉನ್ನತ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವ ಅಧಿಕಾರವಿರುವುದಿಲ್ಲವೆಂದು ಆಮ್ ಆದ್ಮಿ ಪಕ್ಷವು ಹೇಳಿದೆ.
ನರೇಶ್ ಕುಮಾರ್ ಅವರ ಅಧಿಕಾರಾವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿರುವುದು ಯಾವುದೇ ಕಾನೂನಿನ ಉಲ್ಲಂಘನೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಸುಗ್ರೀವಾಜ್ಞೆಯು ಇನ್ನೂ ಕೂಡಾ ರದ್ದುಗೊಳ್ಳದೆ ಇರುವುದರಿಂದ ದಿಲ್ಲಿ ಸರಕಾರದ ಉನ್ನತ ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆಯ ಅಧಿಕಾರವನ್ನು ತಾನು ಹೊಂದಿದ್ದೇನೆಂಬ ಕೇಂದ್ರ ಸರಕಾರದ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಪುರಸ್ಕರಿಸಿತು.