ನ್ಯಾಯದೇವತೆ ಪ್ರತಿಮೆ ಬದಲಾವಣೆಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಖಂಡನೆ : ಸಮಾಲೋಚನೆಗೆ ಆಗ್ರಹ

Update: 2024-10-24 07:49 GMT

ಹೊಸದಿಲ್ಲಿ: ನ್ಯಾಯದೇವತೆ ಪ್ರತಿಮೆ ಹಾಗೂ ಲಾಂಛನ ಸೇರಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಲ್ಲಿ ಮಾಡಿರುವ ಮಾರ್ಪಾಡುಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ನೇತೃತ್ವದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಈ ಮಾರ್ಪಾಡುಗಳ ಕುರಿತು ತನ್ನನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಿದ್ದು, ಈ ಮಾರ್ಪಾಡುಗಳ ಹಿಂದಿರುವ ತರ್ಕವೇನು ಎಂದೂ ಪ್ರಶ್ನಿಸಿದೆ.

ಈ ಕುರಿತು ನಿರ್ಣಯ ಕೈಗೊಂಡಿರುವ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ವಕೀಲರಿಗಾಗಿ ಕೋರಿದ್ದ ಕೆಫೆ ಜಾಗದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವ ಪ್ರಸ್ತಾವನೆ ಕುರಿತೂ ಅಸಮಾಧಾನ ವ್ಯಕ್ತಪಡಿಸಿದೆ. ಆಕ್ಷೇಪಗಳ ಹೊರತಾಗಿಯೂ ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದೆ.

ನ್ಯಾಯದೇವತೆ ಪ್ರತಿಮೆಯ ಕಣ್ಣಿನ ಪಟ್ಟಿ ತೆಗೆದು ಹಾಕಿರುವುದು ಹಾಗೂ ನ್ಯಾಯದೇವತೆಯ ಕೈಯಲ್ಲಿ ಖಡ್ಗದ ಬದಲು ಸಂವಿಧಾನದ ಪ್ರತಿ ಇರುವುದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಬಲವಾಗಿ ಖಂಡಿಸಿದೆ. ಆದರೆ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಸುಪ್ರೀಂ ಕೋರ್ಟ್, ನ್ಯಾಯದೇವತೆಯ ಕಣ್ಣು ಪಟ್ಟಿಯನ್ನು ತೆಗೆದು ಹಾಕಿರುವುದರ ಅರ್ಥ ಭಾರತದಲ್ಲಿನ ಕಾನೂನು ಎಲ್ಲರನ್ನೂ ಸಮಾನವಾಗಿ ನೋಡುವುದನ್ನು ಸಂಕೇತಿಸುತ್ತದೆ ಹಾಗೂ ಖಡ್ಗವು ಹಿಂಸೆಯನ್ನು ಪ್ರತಿನಿಧಿಸುತ್ತದೆ ಎಂಬುದಾಗಿದೆ ಎಂದು ಹೇಳಿದೆ.

ಆದರೆ, ಸುಪ್ರೀಂ ಕೋರ್ಟ್ ಆವರಣದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ವಿರೋಧಿಸಿರುವ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಆ ಜಾಗದಲ್ಲಿ ಬಾರ್ ನ ಸದಸ್ಯರಿಗೆ ಗ್ರಂಥಾಲಯ ಮತ್ತು ಕೆಫೆಯನ್ನು ನಿರ್ಮಿಸಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News