ಉತ್ತರಪ್ರದೇಶ | ಉಪಚುನಾವಣೆಯಲ್ಲಿ INDIA ಮೈತ್ರಿ ಪಕ್ಷದ ಅಭ್ಯರ್ಥಿಗಳು 'ಸೈಕಲ್' ಚಿಹ್ನೆಯಡಿ ಸ್ಪರ್ಧೆ!
ಲಕ್ನೋ : ಮುಂಬರುವ ಉಪಚುನಾವಣೆಯಲ್ಲಿ ಇಂಡಿಯಾ(INDIA) ಮೈತ್ರಿ ಪಕ್ಷದ ಅಭ್ಯರ್ಥಿಗಳು ಎಲ್ಲಾ 9 ಸ್ಥಾನಗಳಲ್ಲಿ ತಮ್ಮ ಪಕ್ಷದ ‘ಸೈಕಲ್’ ಚಿಹ್ನೆಯಡಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಒಗ್ಗಟ್ಟಾಗಿದೆ ಮತ್ತು ದೊಡ್ಡ ಗೆಲುವಿಗಾಗಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಈ ಉಪಚುನಾವಣೆಯಲ್ಲಿ ಎಲ್ಲಾ 9 ವಿಧಾನಸಭಾ ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟವು ಗೆಲುವಿನ ಹೊಸ ಅಧ್ಯಾಯ ಬರೆಯಲಿದೆ ಎಂದು ಹೇಳಿದ್ದಾರೆ.
ದೇಶದ ಸಂವಿಧಾನದ ರಕ್ಷಣೆ, ಶಾಂತಿ ಸ್ಥಾಪನೆ ಮತ್ತು ಹಿಂದುಳಿದವರು, ದಲಿತ ಮತ್ತು ಅಲ್ಪಸಂಖ್ಯಾತರ ಗೌರವ ಕಾಪಾಡಲು ಮುಂಬರುವ ಚುನಾವಣೆಯಲ್ಲಿ ಹೋರಾಡಲಾಗುವುದು ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಕತೇಹಾರಿ (ಅಂಬೇಡ್ಕರ್ ನಗರ), ಕರ್ಹಾಲ್ (ಮೈನ್ಪುರಿ), ಮೀರಾಪುರ (ಮುಜಾಫರ್ನಗರ), ಘಾಜಿಯಾಬಾದ್, ಮಜ್ವಾನ್ (ಮಿರ್ಜಾಪುರ), ಸಿಸಾಮೌ (ಕಾನ್ಪುರ್ ನಗರ), ಖೈರ್ (ಅಲಿಗಢ), ಫುಲ್ಪುರ್ (ಪ್ರಯಾಗರಾಜ್), ಕುಂದರ್ಕಿ (ಮೊರಾದಾಬಾದ್)ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ.
ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆ ಎಸ್ಪಿ ಶಾಸಕ ಇರ್ಫಾನ್ ಸೋಲಂಕಿ ಅನರ್ಹತೆ ಮತ್ತು ಲೋಕಸಭೆ ಚುನಾವಣೆಯಲ್ಲಿ 8 ಶಾಸಕರು ಸಂಸದರಾಗಿ ಆಯ್ಕೆ ಹಿನ್ನೆಲೆ ಅವರಿಂದ ತೆರವಾದ ಸ್ಥಾನಕ್ಕೆ ನ.13ರಂದು ಉಪಚುನಾವಣೆ ನಡೆಯುತ್ತಿದೆ.