ಉತ್ತರಪ್ರದೇಶ | ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಬಯಲಿಗೆಳೆದ ʼಗುಡ್ ಟಚ್, ಬ್ಯಾಡ್ ಟಚ್' ಕುರಿತ ಜಾಗೃತಿ : ಶಿಕ್ಷಕನ ಬಂಧನ

Update: 2024-10-24 06:37 GMT
PC : NDTV 

ಹೊಸದಿಲ್ಲಿ : ವಿದ್ಯಾರ್ಥಿನಿಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಶಾಲಾ ಶಿಕ್ಷಕನನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಿರುವ ಘಟನೆ ಉತ್ತರಪ್ರದೇಶದ ಲಲಿತ್ಪುರ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮದ ಮುಖಂಡನ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪೋಷಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.

‘ಗುಡ್ ಟಚ್, ಬ್ಯಾಡ್ ಟಚ್’ ಕುರಿತು ಅರಿವು ಮೂಡಿಸಲು ಶಿಕ್ಷಕನೋರ್ವ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಸಂವಾದದ ಸಮಯದಲ್ಲಿ, 'ಕೆಟ್ಟ ಸ್ಪರ್ಶ' ಬಗ್ಗೆ ತಿಳಿದುಕೊಂಡ ಮಕ್ಕಳು ನಮ್ಮ ಜೊತೆ ಶಿಕ್ಷಕನೋರ್ವ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ರೂಪ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ

ಆರೋಪಿ ಶಿಕ್ಷಕ ಬಾಲಕಿಯರಿಗೆ ಬಹಳ ಸಮಯದಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಎನ್ನುವುದು ಜಾಗೃತಿ ವೇಳೆ ಬಯಲಾಗಿದೆ.

ಲಲಿತ್ಪುರದ ತಲ್ಬೆಹತ್ ನಲ್ಲಿರುವ ಪೊಲೀಸ್ ಠಾಣೆಯ ಮುಂದೆ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿ ಆರೋಪಿ ಶಿಕ್ಷಕನ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಶಾಲೆ ಮತ್ತು ಶಿಕ್ಷಣ ಅಧಿಕಾರಿಗಳು ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News