ಸೆಂಥಿಲ್ ರ ಪ್ರಾಸಿಕ್ಯೂಷನ್‌ ಅನುಮತಿಗೆ 7 ತಿಂಗಳು ಸಮಯ ಬೇಕಿತ್ತೇ?: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2024-09-03 10:58 GMT

ಸೆಂಥಿಲ್ | PC : thehindu.com

ಹೊಸದಿಲ್ಲಿ: ಸೆಂಥಿಲ್ ರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಏಳು ತಿಂಗಳಿಗಿಂತ ಹೆಚ್ಚು ಸಮಯ ಏಕೆ ತೆಗೆದುಕೊಂಡರು ಎಂದು ಸುಪ್ರೀಂಕೋರ್ಟ್ ತಮಿಳುನಾಡು ರಾಜ್ಯಪಾಲ ಎನ್ ರವಿ ಅವರನ್ನು ಪ್ರಶ್ನಿಸಿದೆ.

ರಾಜ್ಯಪಾಲರ ವಿಳಂಬದ ಬಗ್ಗೆ ನ್ಯಾಯಮೂರ್ತಿಗಳಾದ ಎಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಆಶ್ಚರ್ಯ ವ್ಯಕ್ತಪಡಿಸಿದೆ.

ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಮಾಜಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ದೀರ್ಘ ಸಮಯ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಜನವರಿ 4, 2024 ಕ್ಕಿಂತ ಹಿಂದೆಯೇ ರಾಜ್ಯಪಾಲರಿಂದ ಅನುಮತಿಯನ್ನು ಕೋರಲಾಗಿತ್ತು ಎನ್ನಲಾಗಿದೆ. ಆದರೆ ಆಗಸ್ಟ್ 23 ರಂದು ರಾಜ್ಯಪಾಲರು ಅನುಮತಿ ನೀಡಿದರು ಎಂದು ತಿಳಿದುಬಂದಿದೆ.

ಬಾಲಾಜಿ ವಿರುದ್ಧದ ಮೂರು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಿಗೆ ಪ್ರಕರಣಗಳ ಪ್ರಗತಿಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಪ್ರಾಸಿಕ್ಯೂಷನ್ ಪ್ರಕಾರ ಬಾಲಾಜಿ ವಿರುದ್ಧ ಸೆಕ್ಷನ್ 420 (ವಂಚನೆ) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ಪ್ರಕರಣದಲ್ಲಿ ಕಳೆದ ವರ್ಷ ಸೆಂಥಿಲ್ ಬಾಲಾಜಿ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ)ಯು 1,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News