ಅಸ್ಸಾಮಿನಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಸ್ಥಗಿತಕ್ಕೆ ಸುಪ್ರೀಂ ನಕಾರ

Update: 2023-07-24 18:25 GMT

Photo : ಸುಪ್ರೀಂ | PTI 

ಹೊಸದಿಲ್ಲಿ: ಚುನಾವಣಾ ಆಯೋಗವು ಅಸ್ಸಾಮಿನಲ್ಲಿ ನಡೆಸುತ್ತಿರುವ ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನು ನಿಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.

ಆದರೆ,ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನು ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಿರುವ ಜನತಾ ಪ್ರಾತಿನಿಧ್ಯ ಕಾಯ್ದೆ,1950ರ 8ಎ ಕಲಮ್ನ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಒಪ್ಪಿಕೊಂಡಿತು.

ಅರ್ಜಿಗಳ ಕುರಿತು ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಹೊರಡಿಸಿದ ಪೀಠವು, ಮೂರು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿತು.

ಜೂ.20ರ ಕರಡು ಪ್ರತಿಯಲ್ಲಿ ಚುನಾವಣಾ ಆಯೋಗವು ಮುಸ್ಲಿಮ್ ಬಹುಸಂಖ್ಯಾಕ ವಿಧಾನಸಭಾ ಕ್ಷೇತ್ರಗಳನ್ನು ಇತರ ಹೊಸದಾಗಿ ಸೃಷ್ಟಿಸಲಾದ ಕ್ಷೇತ್ರಗಳಲ್ಲಿ ವಿಲೀನಗೊಳಿಸುವ ಅಥವಾ ಅಧೀನಕ್ಕೊಳಪಡಿಸುವ ಮೂಲಕ ಅವುಗಳನ್ನು ರದ್ದುಗೊಳಿಸುವುದನ್ನು ಪ್ರಸ್ತಾವಿಸಿದೆ. ಈ ಹೊಸ ಕ್ಷೇತ್ರಗಳಲ್ಲಿ ಹೆಚ್ಚಿನವು ಗಣನೀಯ ಹಿಂದು ಜನಸಂಖ್ಯೆಯನ್ನು ಹೊಂದಿವೆ.

ಕಾಂಗ್ರೆಸ್,ಟಿಎಂಸಿ,ಎನ್ಸಿಪಿ,ಸಿಪಿಎಂ,ಆರ್ಜೆಡಿ ಸೇರಿದಂತೆ ಅಸ್ಸಾಮಿನ ಒಂಭತ್ತು ಪ್ರತಿಪಕ್ಷಗಳು ಕ್ಷೇತ್ರ ಮರುವಿಂಗಡಣೆ ಕರಡನ್ನು ರಚಿಸುವಲ್ಲಿ ಚುನಾವಣಾ ಆಯೋಗದ ಕಾರ್ಯವಿಧಾನವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News