LMV ಪರವಾನಗಿ ಇದ್ದರೆ 7,500ಕೆಜಿ ತೂಕದವರೆಗಿನ ವಾಹನ ಚಲಾಯಿಸಬಹುದು: ಸುಪ್ರೀಂ ಕೋರ್ಟ್

Update: 2024-11-06 10:56 GMT

ಹೊಸದಿಲ್ಲಿ: ಲಘು ಮೋಟಾರು ವಾಹನ (LMV) ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆಜಿ ವರೆಗಿನ ತೂಕ ಹೊಂದಿರುವ ಸಾರಿಗೆ ವಾಹನವನ್ನು ಚಲಾಯಿಸಲು ಕಾನೂನುಬದ್ಧವಾಗಿ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ ಎಸ್ ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಸಾರಿಗೆ ವಾಹನದ ತೂಕವು 7500 ಕೆಜಿಯೊಳಗೆ ಇದ್ದರೆ, ಲಘು ಮೋಟಾರು ವಾಹನ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿ ಆ ವಾಹನವನ್ನು ಚಲಾಯಿಸಬಹುದು ಎಂದು ಹೇಳಿದೆ. ಘನ ವಾಹನಗಳ ಚಾಲನೆ ಪರವಾನಿಗೆ ಅವಶ್ಯಕತೆ ಅದಕ್ಕಿಂತ ಹೆಚ್ಚಿನ ಭಾರದ ವಾಹನಗಳಿಗೆ ಮಾತ್ರ ಅವಶ್ಯಕತೆ ಇದೆ ಎಂದು ಹೇಳಿದೆ.

ಈ ಮೊದಲು ಸುಪ್ರೀಂಕೋರ್ಟ್, ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು ನಿರ್ದಿಷ್ಟ ತೂಕದ ಸಾರಿಗೆ ವಾಹನ ಕಾನೂನುಬದ್ಧವಾಗಿ ಚಲಾಯಿಸುವುದಕ್ಕೆ ಕಾನೂನಿನಲ್ಲಿ ಬದಲಾವಣೆ ತರುವ ಅಗತ್ಯವಿದೆಯೇ ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು.

ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಎಲ್ಎಂವಿ ಚಾಲನಾ ಪರವಾನಗಿ ಹೊಂದಿರುವವರು ಜವಾಬ್ದಾರರು ಎಂಬುದಕ್ಕೆ ಯಾವುದೇ ಪ್ರಾಯೋಗಿಕ ಸಾಕ್ಷಿಯಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ತೀರ್ಪಿನ ಆಯ್ದ ಭಾಗಗಳನ್ನು ಓದುವಾಗ ನ್ಯಾಯಮೂರ್ತಿ ರಾಯ್, ರಸ್ತೆ ಸುರಕ್ಷತೆಯು ಜಾಗತಿಕವಾಗಿ ಗಂಭೀರವಾದ ಸಾರ್ವಜನಿಕ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ರಸ್ತೆ ಅಪಘಾತಗಳಿಂದ ಭಾರತದಲ್ಲಿ 1.7 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News