ಕ್ಯಾಂಪಸ್ ಗಳ ಜಾತಿ ತಾರತಮ್ಯದ ವಿರುದ್ಧ ಕೈಗೊಂಡ ಕ್ರಮ ವಿವರಿಸುವಂತೆ ಯುಜಿಸಿಗೆ ಸುಪ್ರೀಂ ನಿರ್ದೇಶನ

Update: 2023-07-07 17:22 GMT

Supreme Court | Photo: PTI

ಹೊಸದಿಲ್ಲಿ: ಕ್ಯಾಂಪಸ್ ಗಳಿಂದ ಜಾತಿ ತಾರತಮ್ಯವನ್ನು ತೊಲಗಿಸಲು ಕೈಗೊಂಡಿರುವ ಸಕಾರಾತ್ಮಕ ಕ್ರಮಗಳನ್ನು ವಿವರಿಸುವಂತೆ ಸರ್ವೋಚ್ಚ ನ್ಯಾಯಾಲಯವು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಕ್ಕೆ ಸೂಚಿಸಿದೆ.

ರೋಹಿತ್ ವೇಮುಲ ಮತ್ತು ಪಾಯಲ್ ತಡವಿ ಅವರ ತಾಯಂದಿರಾಗಿರುವ ಅರ್ಜಿದಾರರ ಯಾತನೆಯನ್ನು ಉಲ್ಲೇಖಿಸಿದ ನ್ಯಾ.ಎ.ಎಸ್.ಬೋಪಣ್ಣ ನೇತೃತ್ವದ ಪೀಠವು, ಅಧಿಕಾರಿಗಳು ಸಂವೇದನಾಶೀಲ ರೀತಿಯಲ್ಲಿ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಯಾವುದೇ ಪೋಷಕರು ಇಂತಹ ನಷ್ಟವನ್ನು ಎದುರಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿತು.

ಯುಜಿಸಿಯು ಸಮಾಲೋಚಕ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ನಿರ್ದಿಷ್ಟ ಕ್ರಮವನ್ನು ರೂಪಿಸುವಾಗ ಅರ್ಜಿದಾರರ ಸಲಹೆ ಪಡೆದುಕೊಳ್ಳಬೇಕು ಎಂದು ನ್ಯಾ.ಎಂ.ಎಂ.ಸುಂದರೇಶ್ ಸೂಚಿಸಿದರು.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಯುಜಿಸಿಯ ಯೋಜನೆಗಳ ಕುರಿತು ವಿಚಾರಿಸಿದ ನ್ಯಾ.ಸುಂದರೇಶ,ಈ ಮಕ್ಕಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಗೆ ಪ್ರೋತ್ಸಾಹ) ನಿಯಮಾವಳಿಗಳು,2012 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಅದನ್ನು ಪಾಲಿಸಲು ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.

ಡೀಮ್ಡ್ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳು ವಿದ್ಯಾರ್ಥಿಗಳಿಂದ ದೂರುಗಳನ್ನು ಸ್ವೀಕರಿಸಲು ಮತ್ತು ಪ್ರತಿಕ್ರಿಯಿಸಲು ‘ಸಮಾನ ಅವಕಾಶ ಕೋಶ’ಗಳನ್ನು ಸ್ಥಾಪಿಸಬೇಕು ಎಂದೂ ಅರ್ಜಿದಾರರು ಹೇಳಿದ್ದಾರೆ.

ಜಾತಿ ಆಧಾರಿತ ತಾರತಮ್ಯವನ್ನು ನಿವಾರಿಸಲು ಎಲ್ಲ ಕ್ರಮಗಳನ್ನು ವಿವಿಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ವೆಬ್ಸೈಟ್ಗಳಲ್ಲಿ ಅಪಲೋಡ್ ಮಾಡಬೇಕು ಎಂದೂ ಅವರು ಹೇಳಿದ್ದಾರೆ.

ಪ್ರೊ.ಸುಖದೇವ್ ಥೋರಟ್ ನೇತೃತ್ವದ ಸಮಿತಿಯ ವರದಿಯು ಕ್ಯಾಂಪಸ್ಗಳಲ್ಲಿ ಜಾತಿ ಆಧಾರಿತ ತಾರತಮ್ಯವು ವ್ಯಾಪಕವಾಗಿದೆ ಎನ್ನುವುದನ್ನು ಬೆಟ್ಟು ಮಾಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಹೈದರಾಬಾದ್ ವಿವಿಯ ಪಿಎಚ್ಡಿ ವಿದ್ಯಾರ್ಥಿ ರೋಹಿತ್ ವೇಮುಲ ಮತ್ತು ಮುಂಬೈನ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ನಿವಾಸಿ ಕಿರಿಯ ವೈದ್ಯೆ ಡಾ.ಪಾಯಲ್ ತಡವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು,ಜಾತಿ ಆಧಾರಿತ ತಾರತಮ್ಯ ಇದಕ್ಕೆ ಕಾರಣವೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News