ನಿವೃತ್ತಿಯ ಒಂದು ದಿನ ಮೊದಲು ತಮಿಳುನಾಡಿನ ಐ ಆರ್‌ ಎಸ್ ಅಧಿಕಾರಿಯ ಅಮಾನತು!

Update: 2024-01-30 12:55 GMT

Photo: thenewsminute.com

ಚೆನ್ನೈ : ನಿವೃತ್ತಿಯಾಗುವ ಒಂದು ದಿನ ಮೊದಲು ಭಾರತೀಯ ಕಂದಾಯ ಸೇವೆ (ಐ ಆರ್ ಎಸ್ ) ಅಧಿಕಾರಿ ಬಿ ಬಾಲಮುರುಗನ್ ಅವರನ್ನು, ಜನವರಿ 29 ರಂದು ಅಮಾನತುಗೊಳಿಸಲಾಗಿದೆ. ಬಾಲಮುರುಗನ್ ಅವರಿಗೆ ಕಳುಹಿಸಲಾದ ಅಧಿಕೃತ ನೋಟಿಸ್ ಪ್ರಕಾರ, ಅವರ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ಬಾಲಮುರುಗನ್ ಅವರ ಅಮಾನತಿಗೆ ಯಾವುದೇ ಕಾರಣವನ್ನು ನೋಟಿಸ್ ಉಲ್ಲೇಖಿಸಿಲ್ಲವಾದರೂ, ಅವರು ಔಪಚಾರಿಕವಾಗಿ ನಿವೃತ್ತರಾಗುವ ಎರಡು ದಿನಗಳ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ. ಬಾಲಮುರುಗನ್ ಅವರು ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸುವಂತೆ ಟೀಕಿಸಿ, ರಾಷ್ಟ್ರಪತಿಗೆ ಪತ್ರ ಬರೆದಿದ್ದರು.

ಸ್ಥಳೀಯ ಬಿಜೆಪಿ ನಾಯಕನೊಂದಿಗಿನ ಕಾನೂನು ಹೋರಾಟದಲ್ಲಿ ಸಿಲುಕಿರುವ ತಮಿಳುನಾಡಿನ ಇಬ್ಬರು ದಲಿತ ರೈತರಿಗೆ ಈಡಿ ಸಮನ್ಸ್ ಕಳುಹಿಸಿದ ನಂತರ ಬಾಲಮುರುಗನ್ ಪತ್ರ ಬರೆದಿದ್ದರು. ಜಾರಿ ನಿರ್ದೇಶನಾಲಯ (ಈಡಿ) ಬಿಜೆಪಿಯ ವಿಸ್ತೃತ ಅಂಗವಾಗಿದೆ ಎಂದು ಆ ಪತ್ರದಲ್ಲಿ  ಬಾಲಮುರುಗನ್ ಆರೋಪಿಸಿದ್ದರು.

ಚೆನ್ನೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಉಪ ಆಯುಕ್ತ ಹುದ್ದೆಯಲ್ಲಿದ್ದ ಬಾಲಮುರುಗನ್, ನಿರ್ಮಲಾ ಅವರು ಈಡಿಯನ್ನು ಯಶಸ್ವಿಯಾಗಿ ಬಿಜೆಪಿ ನೀತಿ ಜಾರಿ ನಿರ್ದೇಶನಾಲಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ, ಅವರು "ಭಾರತದ ಹಣಕಾಸು ಸಚಿವರಾಗಲು ಅನರ್ಹರು" ಎಂದು ವಿತ್ತ ಸಚಿವೆಯನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದರು.

ಜುಲೈ 2023 ರಲ್ಲಿ, 70 ರ ಹರೆಯದ ಮತ್ತು ಸೇಲಂ ಜಿಲ್ಲೆಯ ಅತ್ತೂರಿನಲ್ಲಿ ವಾಸಿಸುತ್ತಿರುವ ಕನ್ನೈಯನ್ ಮತ್ತು ಕೃಷ್ಣನ್ ಎಂಬ ಇಬ್ಬರು ದಲಿತ ರೈತರು ಈಡಿಯಿಂದ ಸಮನ್ಸ್ ಪಡೆದಿದ್ದರು. ತಮ್ಮ ಗ್ರಾಮದಲ್ಲಿ 6.5 ಎಕರೆ ಕೃಷಿ ಭೂಮಿ ಹೊಂದಿರುವ, 1,000  ರೂ. ಮಾಸಿಕ ಪಿಂಚಣಿಯಲ್ಲಿ ಜೀವನ ಸಾಗಿಸುವ ಸಹೋದರ ರೈತರನ್ನು ಈಡಿ ಗುರಿಯಾಗಿಸಿತ್ತು. ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಬಿಜೆಪಿಯ ಗುಣಶೇಖರ್ ವಿರುದ್ಧ ಭೂ ವಿವಾದ ಪ್ರಕರಣವಿರುವುದೇ ಅವರ ಮೇಲಿನ ಸಮನ್ಸ್ ಗೆ ಕಾರಣ ಎನ್ನಲಾಗಿತ್ತು. ಬಿಜೆಪಿ ನಾಯಕ ರೈತರ ಭೂಮಿಯನ್ನು ಅಕ್ರಮವಾಗಿ ದೋಚಲು ಪ್ರಯತ್ನಿಸುತ್ತಿದ್ದ ಎಂಬ ಆರೋಪವಿತ್ತು. ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜನವರಿ 4 ರಂದು ಈಡಿ ರೈತರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಹೇಳಿತ್ತು. ಇನ್ನೂ ಪ್ರಕರಣ ಮುಕ್ತಾಯವಾಗಿಲ್ಲ ಎಂದು ತಿಳಿದು ಬಂದಿದೆ. ಬಾಲಮುರಗನ್ ಅವರ ಪತ್ನಿ ದಲಿತ ಪ್ರವೀಣಾ ಇಬ್ಬರು ರೈತರನ್ನು ಪ್ರತಿನಿಧಿಸುವ ವಕೀಲರಾಗಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಬಾಲಮುರುಗನ್ ಅವರು, “ಈ ಘಟನೆಯು ಜಾರಿ ನಿರ್ದೇಶನಾಲಯವು ಬಿಜೆಪಿಯ ವಿಸ್ತೃತ ಅಂಗವಾಗಿದೆ ಎಂಬುದನ್ನು ತೋರಿಸುತ್ತದೆ. ವಾಸ್ತವವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ನಂತರ, ಜಾರಿ ನಿರ್ದೇಶನಾಲಯವನ್ನು ಯಶಸ್ವಿಯಾಗಿ ಬಿಜೆಪಿ ನೀತಿ ಜಾರಿ ನಿರ್ದೇಶನಾಲಯವಾಗಿ ಪರಿವರ್ತಿಸಿದ್ದಾರೆ” ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News