ತಾಯಿಯ ಅಂತಿಮ ಆಸೆ ಈಡೇರಿಸಲು ಬಿಹಾರದ ಸಂತ್ರಸ್ತನಿಗೆ ನೆರವಾದ ಎಸ್‌ವೈಎಸ್ ನ ‘ಸಾಂತ್ವನಂ’

Update: 2024-08-03 15:30 GMT

PC : X 

ವಯನಾಡ್ : ಭೂಕಸಿತದಲ್ಲಿ ತನ್ನ ಪ್ರೀತಿಯ ತಾಯಿ ಹಾಗೂ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಿಹಾರದ ವೈಶಾಲಿ ಜಿಲ್ಲೆಯ ಭಗವಾನ್‌ಪುರದ ನಿವಾಸಿಯೋರ್ವರಿಗೆ ಕೇರಳ ಮೂಲದ ಸುನ್ನಿ ಯುವಜನ ಸಂಘಂ (ಎಸ್‌ವೈಎಸ್)ಅಡಿಯ ಸ್ವಯಂ ಸೇವಾ ಗುಂಪು ‘ಸಾಂತ್ವನಂ’ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

‘ಹ್ಯಾರಿಶನ್ ಮಲಯಾಳಂ ಎಸ್ಟೇಟ್’ನಲ್ಲಿರುವ ಚಹಾ ಕಾರ್ಖಾನೆಯೊಂದರಲ್ಲಿ ಉದ್ಯೋಗ ದೊರಕಿದ ಬಳಿಕ ಬಿಹಾರ್ ಮೂಲದ ರವಿ ರೋಶನ್ ಕುಮಾರ್ ತನ್ನ ಕುಟುಂಬದೊಂದಿಗೆ ವಯನಾಡ್‌ಗೆ ಸ್ಥಳಾಂತರಗೊಂಡಿದ್ದರು. ಆದರೆ, ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ಅವರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ದುರಂತದಲ್ಲಿ ಅವರ ಪ್ರೀತಿಯ ತಾಯಿ ಫುಲ್‌ಕುಮಾರಿ ದೇವಿ ಹಾಗೂ ಕುಟುಂಬದ ಮೂವರು ಸದಸ್ಯರು ನಾಪತ್ತೆಯಾಗಿದ್ದಾರೆ.

ರವಿಯ ತಾಯಿ ಯಾವಾಗಲೂ ತನ್ನ ಹುಟ್ಟಿದ ಊರಾದ ಭಗವಾನ್‌ಪುರಕ್ಕೆ ಹಿಂದಿರುಗುವ ಕನಸು ಕಾಣುತ್ತಿದ್ದರು. ಆದರೆ, ಆಕೆಯ ಕನಸು ನನಸಾಗಲೇ ಇಲ್ಲ. ರವಿ ಅವರಿಗೆ ಇಲ್ಲಿ ಹತ್ತಿರದ ಸಂಬಂಧಿಕರು ಯಾರೂ ಇಲ್ಲ. ಅಲ್ಲದೆ, ಎಲ್ಲಾ ಉಳಿತಾಯವನ್ನು ದುರಂತದಲ್ಲಿ ಕಳೆದುಕೊಂಡಿದ್ದಾರೆ. ರವಿಯ ಭವಿಷ್ಯ ಕತ್ತಲಾಗಿದೆ. ಆದರೂ ತನ್ನ ತಾಯಿಯ ಆಸೆಯನ್ನು ಈಡೇರಿಸಲು ಆಕೆಯ ಚಿತಾಭಸ್ಮ್ಮವನ್ನು ಭಗವಾನ್‌ಪುರಕ್ಕೆ ಕೊಂಡೊಯ್ದು ನದಿಯಲ್ಲಿ ವಿಸರ್ಜಿಸಲು ನಿರ್ಧರಿಸಿದ್ದಾರೆ. ರವಿ ಅವರ ಸಂಕಷ್ಟವನ್ನು ನೋಡಿ ಅವರಿಗೆ ನೆರವಾಗಲು ‘ಸಾಂತ್ವನ’ ಮುಂದೆ ಬಂದಿದೆ. ಅವರಿಗೆ ಎಲ್ಲಾ ರೀತಿಯ ನೆರವು ನೀಡಲು ಒಪ್ಪಿಕೊಂಡಿದೆ.

ರವಿ ಅವರು ಭಗವಾನ್‌ಪುರಕ್ಕೆ ಹಿಂದಿರುಗಲು ವಿಮಾನದ ಟಿಕೆಟ್, ಇತರ ಅಗತ್ಯದ ನೆರವುಗಳು ಹಾಗೂ ಚಿತಾಭಸ್ಮವನ್ನು ಅವರ ಗ್ರಾಮದ ನದಿಯಲ್ಲಿ ವಿಸರ್ಜಿಸುವ ಮೂಲಕ ತಾಯಿಯ ಅಂತಿಮ ಆಸೆಯನ್ನು ನೆರವೇರಿಸಲು ‘ಸಾಂತ್ವನಂ’ ವ್ಯವಸ್ಥೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News