ಮೋದಿ ಧ್ಯಾನಕ್ಕಾಗಿ ವೆಚ್ಚದ ಮರುವಸೂಲಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಕಾಂಗ್ರೆಸ್

Update: 2024-06-01 15:19 GMT

 ನರೇಂದ್ರ ಮೋದಿ | PC : PTI 

ಚೆನ್ನೈ: ಲೋಕಸಭಾ ಚುನಾವಣೆಗಳಿಗಾಗಿ ಬಿರುಸಿನ ಪ್ರಚಾರ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಕೈಗೊಂಡಿದ್ದ 45 ಗಂಟೆಗಳ ಧ್ಯಾನ ಶನಿವಾರ ಸಂಜೆಗೆ ಸಂಪನ್ನಗೊಂಡಿದೆ. ಪ್ರಧಾನಿಯ ಭದ್ರತೆಗಾಗಿ ವ್ಯಾಪಕ ವ್ಯವಸ್ಥೆಗಳನ್ನು ಏರ್ಪಡಿಸಿದ್ದ ತಮಿಳುನಾಡು ಸರಕಾರವು ಅದಕ್ಕಾಗಿ ಸಾಕಷ್ಟು ವೆಚ್ಚವನ್ನು ಮಾಡಿದೆ. ಇದೀಗ ಮೋದಿಯವರ ಧ್ಯಾನಕ್ಕಾಗಿ ತಗಲಿದ ವೆಚ್ಚದ ಮರುವಸೂಲಿಯನ್ನು ಕೋರಿ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ)ಯು ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.

ಶನಿವಾರ ಸೂರ್ಯೋದಯದ ಸಮಯದಲ್ಲಿ ‘ಸೂರ್ಯ ಅರ್ಘ್ಯ’ವನ್ನು ಅರ್ಪಿಸಿದ ಬಳಿಕ ಮೋದಿ ತನ್ನ ಎರಡನೇ ಮತ್ತು ಅಂತಿಮ ದಿನದ ಧ್ಯಾನದಲ್ಲಿ ತೊಡಗಿದ್ದರೆ ಅತ್ತ ಟಿಎನ್‌ಸಿಸಿ ಸದಸ್ಯ ಎ.ಪಿ.ಸೂರ್ಯಪ್ರಕಾಶಂ ನೇತೃತ್ವದ ವಕೀಲರ ತಂಡವು ಮೋದಿಯವರ ಧ್ಯಾನಕ್ಕಾಗಿ ಮಾಡಲಾಗಿರುವ ವೆಚ್ಚದ ಮರುವಸೂಲಿಯನ್ನು ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ವ್ಯಾಪಕ ಪ್ರಚಾರವನ್ನು ಪಡೆದಿರುವ ಮೋದಿಯವರ ಧ್ಯಾನವು ಬಿಜೆಪಿಗಾಗಿ ಮತಗಳನ್ನು ಸೆಳೆಯುವ ತಂತ್ರವಾಗಿದೆ ಎಂದು ಟಿಎನ್‌ಸಿಸಿ ಆರೋಪಿಸಿದೆ. ಲೋಕಸಭಾ ಚುನಾವಣೆಗಳು ಶನಿವಾರ ಏಳನೇ ಹಂತದ ಮತದಾನದೊಂದಿಗೆ ಅಂತ್ಯಗೊಂಡಿವೆ.

ಮೇ 30ರಂದು ಮೋದಿಯವರು ಆರಂಭಿಸಿದ್ದ ಧ್ಯಾನವನ್ನು ದೂರದರ್ಶನದಲ್ಲಿ ಮತ್ತು ಖಾಸಗಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದ್ದು,ಇದು ಪ್ರತಿಪಕ್ಷಗಳಿಗೆ ಅನನುಕೂಲಕರವಾಗಿದೆ ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ತಾನೀಗ ಮಂಗಳೂರಿನಲ್ಲಿದ್ದೇನೆ ಮತ್ತು ತನ್ನ ಕಿರಿಯ ವಕೀಲರು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಸೂರ್ಯಪ್ರಕಾಶಂ,ತಾನು ಚೆನ್ನೈಗೆ ಮರಳಿದ ಬಳಿಕ ಮೋದಿಯವರ ಕನ್ಯಾಕುಮಾರಿ ಭೇಟಿಗಾಗಿ ಮಾಡಲಾಗಿರುವ ಎಲ್ಲ ವೆಚ್ಚಗಳನ್ನು ವಸೂಲು ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನಗಳನ್ನು ಕೋರಿ ಉಚ್ಚ ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿಯನ್ನು ಸಲ್ಲಿಸುವುದಾಗಿ ಹೇಳಿದರು.

ಪ್ರಧಾನಿಯವರು ಕನ್ಯಾಕುಮಾರಿಗೆ ಖಾಸಗಿ ಭೇಟಿಯನ್ನು ನೀಡಿದ್ದಾರೆ. ಭದ್ರತಾ ಅಂಶಗಳನ್ನು ಬಿಡಿ,ರಾಜ್ಯ ಸರಕಾರವು ಈ ಭೇಟಿಗೆ ಸಂಬಂಧಿಸಿದಂತೆ ಭಾರೀ ಮೊತ್ತವನ್ನು ವ್ಯಯಿಸಿದೆ. ಈ ವೆಚ್ಚ ವನ್ನು ಬಿಜೆಪಿಯಿಂದ ಮರುವಸೂಲು ಮಾಡುವ ಅಗತ್ಯವಿದೆ ಎಂದು ಸೂರ್ಯಪ್ರಕಾಶ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News