ಉಪ ಕುಲಪತಿ ನೇಮಕದ ಅಧಿಸೂಚನೆಯನ್ನು ಹಿಂಪಡೆದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ
ಚೆನ್ನೈ: ಮೂರು ರಾಜ್ಯ ವಿಶ‍್ವವಿದ್ಯಾಲಯಗಳಾದ ಮದ್ರಾಸ್ ವಿಶ್ವವಿದ್ಯಾಲಯ, ಭಾರತಿಯಾರ್ ವಿಶ್ವವಿದ್ಯಾಲಯ ಹಾಗೂ ತಮಿಳುನಾಡು ಶಿಕ್ಷಕರ ತರಬೇತಿ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಗಳನ್ನು ನೇಮಕ ಮಾಡಲು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರ ನಾಮನಿರ್ದೇಶಿತರನ್ನು ನೇಮಕ ಮಾಡುವ ಶೋಧ ಸಮಿತಿಗಳನ್ನು ರಚಿಸಿದ್ದ ತಮ್ಮ ಏಕಪಕ್ಷೀಯ ಹಾಗೂ ವಿವಾದಾತ್ಮಕ ನಿರ್ಧಾರವನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಹಿಂಪಡೆದಿದ್ದು, ಈ ಬೆಳವಣಿಗೆಯನ್ನು ಆಡಳಿತಾರೂಢ ಡಿಎಂಕೆಯ ಪ್ರಮುಖ ವಿಜಯ ಎಂದೇ ಬಣ್ಣಿಸಲಾಗಿದೆ ಎಂದು ndtv.com ವರದಿ ಮಾಡಿದೆ.
ಆದರೆ, ಈ ನಿರ್ಧಾರವನ್ನು ಕಾನೂನುಬಾಹಿರ ಎಂದು ದೂರಿದ್ದ ತಮಿಳುನಾಡು ಸರ್ಕಾರವು, ವಿಶ್ವವಿದ್ಯಾಲಯ ಅನುದಾನ ಆಯೋಗದ ನಾಮನಿರ್ದೇಶಿತರನ್ನು ಹೊರಗಿಟ್ಟು ಸಮಿತಿಗಳನ್ನು ಮರು ರಚಿಸಿತ್ತು ಹಾಗೂ ರಾಜ್ಯಪಾಲರ ನಡೆಯನ್ನು ಪ್ರಶ‍್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಬೆಳವಣಿಗೆಯು ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಪ್ರಾರಂಭಿಸುವುದಕ್ಕೂ ಮುನ್ನ ನಡೆದಿದೆ. ಇದಲ್ಲದೆ, ವಿಧಾನಸಭೆಯು ಅನುಮೋದನೆ ನೀಡಿದ ಮಸೂದೆಗಳನ್ನು ವಿಲೇವಾರಿ ಮಾಡಲು ರಾಜ್ಯಪಾಲರಿಗೆ ಕಾಲಮಿತಿ ವಿಧಿಸಬೇಕು, ತಮಿಳುನಾಡು ನಾಗರಿಕ ಸೇವಾ ಆಯೋಗದಂಥ ಪ್ರಮುಖ ಸಂಸ್ಥೆಗಳಲ್ಲಿನ ನೇಮಕಗಳಿಗೆ ಅನುಮೋದನೆ ನೀಡಬೇಕು ಹಾಗೂ ಎಐಎಡಿಎಂಕೆಯ ಮಾಜಿ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸಲು ಅನುಮತಿ ನೀಡಬೇಕು ಎಂದೂ ರಾಜ್ಯ ಸರ್ಕಾರವು ಮನವಿ ಮಾಡಿದೆ.
ಆಡಳಿತಾರೂಢ ಡಿಎಂಕೆ ಪಕ್ಷವು ಈ ಬೆಳವಣಿಗೆಯಿಂದ ಉತ್ತೇಜಿತಗೊಂಡಿದ್ದು, ಈ ಬೆಳವಣಿಗೆಯನ್ನು ತನ್ನ ಪ್ರಮುಖ ವಿಜಯ ಎಂದು ಹೇಳಿಕೊಂಡಿದೆ.