ತಮಿಳುನಾಡು: ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು ಜಲ್ಲಿಕಟ್ಟು ಪರಿಣತರ ಬಳಕೆ
ಮಧುರೈ: ತಮಿಳುನಾಡಿನ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಪ್ರಾಚೀನ ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿಗಳನ್ನು ಪಳಗಿಸುವ ಪರಿಣತರ ಕೌಶಲವನ್ನು ಇದೀಗ ಮಧುರೈ ಪಟ್ಟಣದಲ್ಲಿ ವ್ಯಾಪಕವಾಗಿರುವ ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 12 ಮಂದಿ ನುರಿತ ಜಲ್ಲಿಕಟ್ಟು ಯೋಧರು ಈ ಬಾರಿ ವಿಭಿನ್ನ ಬಗೆಯ ಸವಾಲು ಎದುರಿಸುತ್ತಿದ್ದಾರೆ. ಬೀದಿಗಳಲ್ಲಿ ದಾಂಧಲೆ ನಡೆಸುವ ಬಿಡಾಡಿ ದನಗಳನ್ನು ಹಿಡಿಯುವುದು ಇವರ ಮುಂದಿರುವ ಸವಾಲು.
ಈ ಬಿಡಾಡಿ ಜಾನುವಾರುಗಳು ನಗರದಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಸಂಚಾರಕ್ಕೆ ಅಡ್ಡಿಪಡಿಸುವುದಲ್ಲದೇ, ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು, ಅಪಘಾತಕ್ಕೆ ಕಾರಣವಾಗುವುದು ಮುಂತಾದ ಘಟನೆಗಳು ವರದಿಯಾಗುತ್ತಿವೆ.
ನಗರ ಆರೋಗ್ಯಾಧಿಕಾರಿ ವಿನೋದ್ ಕುಮಾರ್ ಅವರ ಪ್ರಕಾರ, ಬಿಡಾಡಿ ಹಸುಗಳು ವಾರಕ್ಕೆ ಒಂದರಿಂದ ಎರಡು ಅಪಘಾತಗಳಿಗೆ ಕಾರಣವಾಗುತ್ತಿವೆ. ಕಳೆದ ಭಾನುವಾರ 58 ವರ್ಷದ ಮಹಿಳೆಯೊಬ್ಬರು ಹೋರಿಯ ತಿವಿತದಿಂದ ತೆರೆದ ಚರಂಡಿಗೆ ಬಿದ್ದಿದ್ದಾರೆ. ಚೆನ್ನೈನಲ್ಲಿ ದನವೊಂದು ಗರ್ಭಿಣಿ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿದಾಗ 80 ವರ್ಷದ ವ್ಯಕ್ತಿಯೊಬ್ಬರು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಸು ಪಳಗಿಸುವವರ ಪ್ರಯತ್ನಗಳು ಉತ್ತೇಜನಕಾರಿ ಫಲಿತಾಂಶಗಳನ್ನು ನೀಡುತ್ತಿವೆ. ಮಧುರೈ ನಗರದಲ್ಲಿ ಕಳೆದ 15 ದಿನಗಳಲ್ಲಿ 90 ಬಿಡಾಡಿ ದನಗಳನ್ನು ಹಿಡಿಯಲಾಗಿದೆ. ಇದಕ್ಕೂ ಮುನ್ನ ಕಳೆದ ತಿಂಗಳು 40-50 ಹಸುಗಳನ್ನು ಹಿಡಿಯಲಾಗಿತ್ತು. ಮಧುರೈ ಮಹಾನಗರ ಪಾಲಿಕೆ, ಪ್ರತಿ ದಿನ ಬಿಡಾಡಿ ದನಗಳನ್ನು ಹಿಡಿದದ್ದಕ್ಕಾಗಿ 2000 ರೂಪಾಯಿ ಬಹುಮಾನ ನೀಡುತ್ತಿದೆ. ಜತೆಗೆ ರಸ್ತೆಗೆ ದನಗಳನ್ನು ಬಿಡುವವರ ಮೇಲೆ 10 ಸಾವಿರ ರೂಪಾಯಿವರೆಗೂ ದಂಡ ವಿಧಿಸುತ್ತದೆ. ಮೊದಲ ಬಾರಿಯ ಅಪರಾಧಕ್ಕೆ 4000 ರೂಪಾಯಿ ದಂಡ ವಿಧಿಸಲಾಗುತ್ತಿದೆ.
"ಇದೇನೂ ಲಾಭದಾಯಕ ವೃತ್ತಿಯಲ್ಲ; ಆದರೆ ಜಲ್ಲಿಕಟ್ಟು ಆಫ್ ಸೀಸನ್ ನಲ್ಲಿ ನಮಗೆ ಅಭ್ಯಾಸಕ್ಕೆ ಅನುಕೂಲವಾಗುತ್ತದೆ" ಎಂದು 43 ವರ್ಷದ ತಂಡ ಮುಖ್ಯಸ್ಥ ತಮಿಳ್ ಸೆಲ್ವನ್ ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಲವು ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿರುವ 24ರ ಯುವಕ ಎಸ್.ಕಾರ್ತಿಕ್, "ಹಸು ಮತ್ತು ಕರುಗಳನ್ನು ನಿಭಾಯಿಸುವುದು ಸುಲಭ. ಆದರೆ ಜಲ್ಲಿಕಟ್ಟುವಿನಲ್ಲಿ ವ್ಯಾಪಕವಾಗಿ ಬಳಸುವ ವನ್ಯಥೇಣಿ ಮಲ್ನಾಡು ಮುಂತಾದ ಕೆಲ ತಳಿಗಳ ಹಸುಗಳನ್ನು ಹಿಡಿಯುವುದು ನಿಜಕ್ಕೂ ಸವಾಲು" ಎನ್ನುತ್ತಾರೆ.