ಕೇಂದ್ರದಿಂದ ಕೆಲವು ಆಯ್ದ ಕಾರ್ಪೊರೇಟ್ ಕಂಪೆನಿಗಳಿಗೆ ತೆರಿಗೆ ಸೌಲಭ್ಯ: ಜೈರಾಮ್ ರಮೇಶ್

Update: 2024-02-14 15:53 GMT

ಜೈರಾಮ್ ರಮೇಶ್ | Photo: PTI 

ಹೊಸದಿಲ್ಲಿ: ಕೇಂದ್ರ ಸರಕಾರ ಕೆಲವು ಆಯ್ದ ಕಾರ್ಪೊರೇಟ್ ಕಂಪೆನಿಗಳಿಗೆ ತೆರಿಗೆ ಸೌಲಭ್ಯ ನೀಡುತ್ತಿದೆ. ದೇಶದ ಬಡವರು ಹಾಗೂ ಸಾಮಾನ್ಯ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.

ವೈಯುಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹವಾಗುವ ಹಣ ಕಾರ್ಪೊರೇಟ್ ತೆರಿಗೆಯಿಂದ ಸಂಗ್ರಹವಾಗುವ ಹಣಕ್ಕಿಂತ ಹೆಚ್ಚಾಗಿದೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.

ಬಡವರು ಬೆಲೆ ಏರಿಕೆ ಹಾಗೂ ಅತ್ಯಧಿಕ ತೆರಿಗೆಯಿಂದ ಬವಣೆ ಪಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಯ್ದ ಸ್ನೇಹಿತರಿಗೆ ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಿರುವುದರ ನೇರ ಪರಿಣಾಮ ಇದು ಎಂದು ಅವರು ಆರೋಪಿಸಿದ್ದಾರೆ.

‘‘ಕಳೆದ ಮೂರು ದಶಕಗಳಲ್ಲೇ ಮೊದಲ ಬಾರಿಗೆ (2020-21ರ ಸಾಂಕ್ರಾಮಿಕ ರೋಗವನ್ನು ಹೊರತುಪಡಿಸಿ) ಕೇಂದ್ರ ಸರಕಾರ ಕಾರ್ಪೊರೇಟ್ ತೆರಿಗೆ (9 ಲಕ್ಷ ಕೋಟಿ ರೂ.)ಗಿಂತ ವೈಯುಕ್ತಿಕ ಆದಾಯ ತೆರಿಗೆ (10 ಲಕ್ಷ ಕೋಟಿ ರೂ.)ಯಿಂದ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ’’ ಎಂದು ಅವರು ಹೇಳಿದರು.

‘‘ಟ್ರಂಪ್ ಅವರ ಮರು ಚುನಾವಣಾ ಪ್ರಚಾರಕ್ಕೆ ಉತ್ತೇಜನ ನೀಡಲು ಹೂಸ್ಟನ್ ನ ಹೌಡಿ ಮೋದಿ ಕಾರ್ಯಕ್ರಮಕ್ಕೆ ತೆರಳುವ ಸ್ಪಲ್ಪ ಸಮಯದ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಆಪ್ತ ಸ್ನೇಹಿತರಿಗೆ ತೆರಿಗೆ ಕಡಿತದ ರೂಪದಲ್ಲಿ 1.84 ಲಕ್ಷ ಕೋಟಿ ರೂ. ನೀಡಿದ ನೇರ ಪರಿಣಾಮ ಇದಾಗಿದೆ’’ ಎಂದು ಅವರು ‘ಎಕ್ಸ್’ನ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

‘‘ಈ ತೆರಿಗೆ ಕಡಿತ 2019ರಲ್ಲಿ ಶೇ. 0.7 ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ನೆರವಾದವು. ಆದರೆ, ಬಡವರು, ಮಧ್ಯಮವರ್ಗ, ಸಣ್ಣ ಉದ್ಯಮಿಗಳು ಬೆಲೆ ಏರಿಕೆ ಹಾಗೂ ಅತ್ಯಧಿಕ ತೆರಿಗೆಯಿಂದ ಬವಣೆ ಪಡುವಂತಾಯಿತು’’ ಎಂದು ಜೈರಾಮ್ ರಮೇಶ್ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News