ಶಂಭು ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗ

Update: 2024-02-16 15:53 GMT

Photo : PTI

ಚಂಡಿಗಢ: ಅಂಬಾಲ ಸಮೀಪದ ಶಂಬು ಗಡಿಯಲ್ಲಿ ಬ್ಯಾರಿಕೇಡ್ ಗಳತ್ತ ಸಾಗುತ್ತಿದ್ದ ರೈತ ಪ್ರತಿಭಟನಕಾರರನ್ನು ಚದುರಿಸಲು ಹರ್ಯಾಣ ಪೊಲೀಸರು ಶುಕ್ರವಾರ ಅಶ್ರುವಾಯು ಸೆಲ್‌ ಗಳನ್ನು ಪ್ರಯೋಗಿಸಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ‘ದಿಲ್ಲಿ ಚಲೋ’ ರ‍್ಯಾಲಿಯ ನಾಲ್ಕನೇ ದಿನ ಈ ಮುಖಾಮುಖಿ ಸಂಭವಿಸಿದೆ.

ಹರ್ಯಾಣದೊಂದಿಗಿನ ಪಂಜಾಬಿನ ಗಡಿಯ ಶಂಭು ಹಾಗೂ ಖನೌರಿ ಕೇಂದ್ರದಲ್ಲಿ ಪಂಜಾಬಿನ ರೈತ ಪ್ರತಿಭಟನಕಾರರು ಬೀಡು ಬಿಟ್ಟಿದ್ದಾರೆ. ಪ್ರತಿಭಟನೆಯ ಮೊದಲ ಎರಡು ದಿನಗಳಲ್ಲಿ ಕೂಡ ಹರ್ಯಾಣ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ಸಂಭವಿಸಿತ್ತು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಆಗ್ರಹಿಸಲು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ‘ದಿಲ್ಲಿ ಚಲೋ’ ರ‍್ಯಾಲಿಗೆ ಕರೆ ನೀಡಿದೆ.

ಪಂಜಾಬಿನ ರೈತರು ದಿಲ್ಲಿಗೆ ತಮ್ಮ ರ‍್ಯಾಲಿಯನ್ನು ಮಂಗಳವಾರ ಆರಂಭಿಸಿದ್ದರು. ಆದರೆ, ಶಂಭು ಹಾಗೂ ಖನೌರಿ ಗಡಿ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ಅಲ್ಲದೆ, ಎಂ.ಎಸ್., ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಹಾಗೂ ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ಶುಲ್ಕ ಏರಿಸದಂತೆ, ಪೊಲೀಸ್ ಪ್ರಕರಣ ಹಿಂಪಡೆಯುವಂತೆ, 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ, ಭೂಸ್ವಾಧೀನ ಕಾಯ್ದೆ 2013 ಅನ್ನು ಮರುಸ್ಥಾಪಿಸುವಂತೆ, 2020-21ರಲ್ಲಿ ನಡೆದ ಪ್ರತಿಭಟನೆ ಸಂದರ್ಭ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೂಡ ರೈತರು ಆಗ್ರಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News