ಲಾಲು ಪ್ರಸಾದ್ ಬ್ಯಾಡ್ಮಿಂಟನ್ ಆಡುತ್ತಿರುವ ವೀಡಿಯೊ ಪೋಸ್ಟ್ ಮಾಡಿದ ತೇಜಸ್ವಿ ಯಾದವ್

Update: 2023-07-29 09:05 GMT

ಹೊಸದಿಲ್ಲಿ: ಬಿಹಾರದ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಇಂದು ತಮ್ಮ ತಂದೆ ಹಾಗೂ ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಬ್ಯಾಡ್ಮಿಂಟನ್ ನಲ್ಲಿ ತಮ್ಮ ಕೈಚಳಕ ಪ್ರದರ್ಶಿಸುತ್ತಿರುವ ವೀಡಿಯೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿಕ್ಕ ವೀಡಿಯೊದಲ್ಲಿ ಲಾಲು ಯಾದವ್ ಅವರು ನೆಟ್ ನಲ್ಲಿ ಶಟಲ್ ಅನ್ನು ಹೊಡೆದ ನಂತರ ನಗುತ್ತಿರುವುದನ್ನು ಕಾಣಬಹುದು.

“ಭಯಪಡುವುದನ್ನು ಕಲಿತಿಲ್ಲ, ತಲೆಬಾಗುವುದನ್ನು ಕಲಿತಿಲ್ಲ. ಅವರು ಹೋರಾಡಿದ್ದಾರೆ, ಹೋರಾಡುತ್ತಾರೆ, ಜೈಲಿಗೆ ಹೆದರುವುದಿಲ್ಲ. ಅವರು ಅಂತಿಮವಾಗಿ ಗೆಲ್ಲುತ್ತಾರೆ, ”ಎಂದು ತೇಜಸ್ವಿ ಯಾದವ್ ಫೋಟೊ ಶೀರ್ಷಿಕೆಯಲ್ಲಿ ಬರೆದಿದ್ದಾರೆ,

ಭ್ರಷ್ಟಾಚಾರ ಪ್ರಕರಣಗಳಲ್ಲಿ ತಮ್ಮ ತಂದೆಯ ಸುದೀರ್ಘ ಕಾನೂನು ಹೋರಾಟ ಮತ್ತು ಅವರನ್ನು ಮೌನಗೊಳಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ಉಲ್ಲೇಖಿಸಿ ತೇಜಸ್ವಿ ಯಾದವ್ ಈ ರೀತಿ ಬರೆದಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರು ಸುಮಾರು ಏಳು ತಿಂಗಳ ಕಾಲ ಬಿಹಾರದಿಂದ ದೂರವಿದ್ದರು, ಈ ಸಮಯದಲ್ಲಿ ಅವರು ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡರು ಹಾಗೂ ದಿಲ್ಲಿಯಲ್ಲಿರುವ ತಮ್ಮ ಹಿರಿಯ ಮಗಳು ಮಿಸಾ ಭಾರತಿ ಅವರ ಮನೆಯಲ್ಲಿ ಚೇತರಿಸಿಕೊಂಡರು.

ಕಳೆದ ವರ್ಷ ಡಿಸೆಂಬರ್ ನಲ್ಲಿ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಯಾದವ್ ಈ ವರ್ಷದ ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದರು.

75 ವರ್ಷದ ಲಾಲು ಯಾದವ್ ಅವರು ತೀವ್ರ ಮೂತ್ರಪಿಂಡದ ತೊಂದರೆಗಳಿಂದ ಬಳಲುತ್ತಿದ್ದರು ಹಾಗೂ ಅವರಿಗೆ ಮೂತ್ರಪಿಂಡ ಕಸಿ ಮಾಡಲು ಸಲಹೆ ನೀಡಲಾಯಿತು. ಅವರ ಪುತ್ರಿ ರೋಹಿಣಿ ಕಿಡ್ನಿ ದಾನ ಮಾಡಲು ಮುಂದೆ ಬಂದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News