ಬೆಂಗಳೂರು ಮೆಟ್ರೊ ದರ ಏರಿಕೆಯನ್ನು ಲೋಕಸಭೆಯಲ್ಲಿ ಖಂಡಿಸಿದ ತೇಜಸ್ವಿ ಸೂರ್ಯ

Update: 2025-02-11 21:48 IST
Tejaswi Surya

ತೇಜಸ್ವಿ ಸೂರ್ಯ | PTI 

  • whatsapp icon

ಹೊಸದಿಲ್ಲಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಬೆಂಗಳೂರು ಮೆಟ್ರೊದ ಬೆಲೆ ಏರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಶೂನ್ಯ ಅವಧಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಬೆಲೆಯೇರಿಕೆಯು ಮಧ್ಯಮ ವರ್ಗದ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಕಿರು ಅಂತರದ ಪ್ರಯಾಣದ ಟಿಕೆಟ್ ದರಗಳ ತೀವ್ರ ಏರಿಕೆಯನ್ನು ಖಂಡಿಸಿದರು. ಹಲವು ಮೆಟ್ರೋ ಸ್ಟೇಶನ್‌ಗಳಲ್ಲಿ ದರವು ದ್ವಿಗುಣವಾಗಿದೆ ಎಂದು ಹೇಳಿದರು. ಈ ಬೆಲೆಯೇರಿಕೆಯು ಬೆಂಗಳೂರು ಮೆಟ್ರೊವನ್ನು ದೇಶದ ಅತ್ಯಂತ ದುಬಾರಿ ಮೆಟ್ರೊ ಜಾಲವನ್ನಾಗಿಸಿದೆ ಎಂದು ಹೇಳಿದ ಅವರು, ಕೈಗೆಟುಕುವ ದರದಲ್ಲಿ ಸಾರ್ವಜನಿಕ ಸಾರಿಗೆಯ ಆಯ್ಕೆಯೊಂದನ್ನು ನೀಡುವ ಮೆಟ್ರೋದ ಮೂಲ ಉದ್ದೇಶವೇ ವಿಫಲವಾಗಿದೆ ಎಂದರು.

‘‘ದರ ಪಟ್ಟಿಯನ್ನು ಮರುಪರಿಶೀಲಿಸಬೇಕು ಮತ್ತು ಸಾಮಾನ್ಯ ಜನರಿಗೂ ಈ ಸೌಲಭ್ಯ ಲಭಿಸುವಂತೆ ನೋಡಿಕೊಳ್ಳಲು ಸೇವೆಯನ್ನು ಮಿತದರದಲ್ಲಿ ಒದಗಿಸಬೇಕು ಎಂಬುದಾಗಿ ನಾನು ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ’’ ಎಂದು ತೇಜಸ್ವಿ ಸೂರ್ಯ ಹೇಳಿದರು.

ಬಳಿಕ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರನ್ನೂ ಭೇಟಿಯಾಗಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದರು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಏರಿಸಿರುವ ದರದ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಅತೃಪ್ತಿಯನ್ನು ಅವರು ಸಚಿವರ ಗಮನಕ್ಕೆ ತಂದರು.

ದರ ನಿಗದಿ ಸಮಿತಿಯು ಶನಿವಾರ ಬೆಂಗಳೂರು ಮೆಟ್ರೊ ದರವನ್ನು ಏರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News