ತೆಲಂಗಾಣ: ಪ್ರಧಾನಿಯಿಂದ 13,500 ಕೋ.ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ
ಹೊಸದಿಲ್ಲಿ : ಕೇಂದ್ರ ಸರಕಾರವು 900 ಕೋ.ರೂ.ವೆಚ್ಚದಲ್ಲಿ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಕೇಂದ್ರೀಯ ಬುಡಕಟ್ಟು ವಿವಿಯನ್ನು ಸ್ಥಾಪಿಸಲಿದೆ. ಈ ವಿವಿಯನ್ನು ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿವಿ ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ. ಅರಿಷಿಣ ಬೆಳೆಗಾರರ ಅನುಕೂಲಕ್ಕಾಗಿ ರಾಷ್ಟ್ರೀಯ ಅರಿಷಿಣ ಮಂಡಳಿಯನ್ನು ಸ್ಥಾಪಿಸಲು ಕೇಂದ್ರವು ನಿರ್ಧರಿಸಿದೆ ಎಂದೂ ಅವರು ತಿಳಿಸಿದರು.
ಅವರು ರವಿವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯಲ್ಲಿ ಒಟ್ಟು 13,500 ಕೋ.ರೂ.ಗೂ ಅಧಿಕ ವೆಚ್ಚದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಪೂರ್ಣಗೊಂಡ ನಿರ್ಮಾಣಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ನಾಗ್ಪುರ-ವಿಜಯವಾಡಾ ಆರ್ಥಿಕ ಕಾರಿಡಾರ್ ನ ಭಾಗವಾಗಿರುವ 6,400 ಕೋ.ರೂ.ಒಟ್ಟು ವೆಚ್ಚದ ಪ್ರಮುಖ ರಸ್ತೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಮೋದಿ, ಭಾರತಮಾಲಾ ಯೋಜನೆ ಯಡಿ 2,460 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ 59 ಕಿ.ಮೀ.ಉದ್ದದ ಸೂರ್ಯಪೇಟ್-ಖಮ್ಮಾಮ್ ಚತುಷ್ಪಥ ರಸ್ತೆಯನ್ನು ಉದ್ಘಾಟಿಸಿದರು. ಇದು ಹೈದರಾಬಾದ್-ವಿಶಾಖಪಟ್ಟಣ ಕಾರಿಡಾರ್ ನ ಭಾಗವಾಗಿದೆ. 500 ಕೋ.ರೂ.ವೆಚ್ಚದ 37 ಕಿ.ಮೀ.ಉದ್ದದ ಜಾಕ್ಲೈರ್-ಕೃಷ್ಣಾ ನೂತನ ರೈಲು ಮಾರ್ಗವನ್ನೂ ಅವರು ಉದ್ಘಾಟಿಸಿದರು.
2,170 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಹಾಸನ-ಚೆರ್ಲಪಲ್ಲಿ ಎಲ್ ಪಿ ಜಿ ಕೊಳವೆ ಮಾರ್ಗ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ ಹೈದರಾಬಾದ್-ರಾಯಚೂರು-ಹೈದರಾಬಾದ್ ರೈಲು ಸೇವೆಗೂ ಹಸಿರು ನಿಶಾನೆ ತೋರಿಸಿದರು.