ತೆಲಂಗಾಣ : ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ಟಿಡಿಪಿ ನಿರ್ಧಾರ
ಹೈದರಾಬಾದ್ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯು ನಿರ್ಧರಿಸಿದೆ. ಟಿಡಿಪಿ ನೆರೆಯ ಆಂಧ್ರಪ್ರದೇಶದಲ್ಲಿ ಎನ್ಡಿಎ ಭಾಗವಾಗಿದ್ದರೂ ತೆಲಂಗಾಣದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕತ್ವವು ಇನ್ನಷ್ಟೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಸದ್ಯಕ್ಕೆ ಆ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂದು ಪಕ್ಷದ ವಕ್ತಾರರಾದ ಜ್ಯೋತ್ಸ್ನಾ ತಿರುನಗರಿ ತಿಳಿಸಿದ್ದಾರೆ.
ಆದಾಗ್ಯೂ ಈ ವರ್ಷದ ಜೂನ್ ಅಥವಾ ಜುಲೈನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ಟಿಡಿಪಿ ತನ್ನ ರಾಜಕೀಯ ಇನಿಂಗ್ಸ್ ಪುನರಾರಂಭಿಸಲಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
ಟಿಡಿಪಿಯ ರಾಜಕೀಯ ಪಯಣವು ಕಳೆದ ಕೆಲವು ವರ್ಷಗಳಿಂದ ಪ್ರತಿಕೂಲ ವಾತಾವರಣದಲ್ಲಿ ಸಾಗುತ್ತಿದೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರ ಪ್ರದೇಶ ಪೋಲಿಸರು ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಕಳೆದ ವರ್ಷದ ನ.30ರಂದು ನಡೆದಿದ್ದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿಯೂ ಟಿಡಿಪಿ ಸ್ಪರ್ಧಿಸಿರಲಿಲ್ಲ. ಹೀಗಾಗಿ ಟಿಡಿಪಿ ರಾಜ್ಯಾಧ್ಯಕ್ಷ ಕೆ.ಜ್ಞಾನೇಶ್ವರ ಅವರು ಚುನಾವಣೆಗೆ ಮುನ್ನ ಪಕ್ಷವನ್ನು ತೊರೆದು ಬಿಆರ್ಎಸ್ ಸೇರಿದ್ದರು, ಆಗಿನಿಂದ ಟಿಡಿಪಿಯ ರಾಜ್ಯ ಘಟಕಕ್ಕೆ ಅಧ್ಯಕ್ಷರಿಲ್ಲ.
ತೆಲಂಗಾಣ 17 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೇ 3ರಂದು ಮತದಾನ ನಡೆಯಲಿದೆ.