ನಾಸಿಕ್ ಬಳಿ ಟೆಂಪೋ- ಟ್ರಕ್ ಢಿಕ್ಕಿ: 8 ಮಂದಿ ಮೃತ್ಯು
ಹೊಸದಿಲ್ಲಿ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ರವಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ನಾಸಿಕ್ ಜಿಲ್ಲೆಯ ದ್ವಾರಕಾ ಸರ್ಕಲ್ ಅಯ್ಯಪ್ಪ ದೇವಾಲಯ ಬಳಿ ಈ ದುರಂತ ಸಂಭವಿಸಿದೆ.
ಸಿಐಡಿಸಿಓ ಪ್ರದೇಶಕ್ಕೆ ಹೋಗುತ್ತಿದ್ದ ಸುಮಾರು 16 ಮಂದಿ ಪ್ರಯಾಣಿಕರು ಇದ್ದ ಟೆಂಪೊ, ಲಾರಿಗೆ ಡಿಕ್ಕಿ ಹೊಡೆಯಿತು. ಟೆಂಪೊದಲ್ಲಿದ್ದವರು ನಿಪ್ಹಾಡ್ ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದರು. ಟೆಂಪೊ ಚಾಲಕ ನಿಯಂತ್ರಣ ಕಳೆದುಕೊಂಡು, ಕಬ್ಬಿಣದ ರಾಡ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡೆಯಿತು. ಕೆಲ ಮಂದಿ ಸ್ಥಳದಲ್ಲೇ ಅಸು ನೀಗಿದರು. ಕೆಲ ಮಂದಿ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರು ಮತ್ತು ಹಾದು ಹೋಗುತ್ತಿದ್ದವರು ತಕ್ಷಣವೇ ಜನದಟ್ಟಣೆಯ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.