ಕೇರಳ: ಕ್ರಿಸ್ಮಸ್ ಸಂಭ್ರಮಾಚರಣೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿತ; ಹಲವರಿಗೆ ಗಾಯ

Update: 2023-12-26 05:58 GMT

Photo: PTI

ತಿರುವನಂತಪುರಂ: ಕ್ರಿಸ್ಮಸ್ ಸಂಭ್ರಮಾಚರಣೆಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಯೊಂದು ಕುಸಿದು ಬಿದ್ದಿದ್ದರಿಂದ ಹಲವಾರು ಮಂದಿ ಗಾಯಗೊಂಡಿರುವ ಘಟನೆ ನೆಯ್ಯಟ್ಟಿಕಾರ ಬಳಿಯ ಪೂವರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯಲ್ಲಿ ಸುಮಾರು 7-8 ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಉಳಿದವರಿಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿವೆ” ಎಂದು ಅವರು ಹೇಳಿದ್ದಾರೆ.

ಈ ಘಟನೆಯು ಸೋಮವಾರ ರಾತ್ರಿ 9 ಗಂಟೆಯ ಸಮಯದಲ್ಲಿ ನಡೆದಿದ್ದು, ಹಲವಾರು ಮಂದಿ ನಿಂತಿದ್ದ ಸೇತುವೆಯು ಭಾರ ತಡೆಯಲಾರದೆ ಒಂದು ಕಡೆ ವಾಲಿದ್ದರಿಂದ, ಆ ಬದಿಯಲ್ಲಿ ನಿಂತಿದ್ದವರೆಲ್ಲ ಉರುಳಿ ಬಿದ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಸ್ಮಸ್ ಸಂಭ್ರಮಾಚರಣೆಯ ಅಂಗವಾಗಿ ಮತ್ತೊಂದು ಬದಿಯಲ್ಲಿನ ಜಲಪಾತ, ಅಲಂಕಾರಗಳನ್ನು ವೀಕ್ಷಿಸುವ ಸಲುವಾಗಿ ಆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಆ ತಾತ್ಕಾಲಿಕ ಸೇತುವೆಯನ್ನು ನೆಲದ ಮಟ್ಟದಿಂದ ಐದು ಅಡಿ ಎತ್ತರ ನಿರ್ಮಿಸಲಾಗಿತ್ತು.

“ಹಲವಾರು ಮಂದಿ ಆ ಸೇತುವೆಯ ಮೇಲೆ ಏಕಕಾಲಕ್ಕೆ ಏರಿದ್ದರಿಂದ ಈ ಅವಘಡ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News