ಜನತೆಯ ಸಹಿಷ್ಣುತೆಯನ್ನು ಪರೀಕ್ಷಿಸಲಾಗುತ್ತಿದೆಯೇ?: ‘ಆದಿಪುರುಷ್’ ಚಿತ್ರಕ್ಕೆ ಅಲಹಾಬಾದ್ ಹೈಕೋರ್ಟ್ ತರಾಟೆ
ಲಕ್ನೊ : ಪ್ರೇಕ್ಷಕರ ಒಂದು ದೊಡ್ಡ ವರ್ಗದ ಆಕ್ರೋಶಕ್ಕೆ ಕಾರಣವಾಗಿರುವ ಬಾಲಿವುಡ್ ಚಿತ್ರ ಆದಿಪುರುಷ್ ನಲ್ಲಿನ ಸಂಭಾಷಣೆಗಳಿಗಾಗಿ ಅಲಹಾಬಾದ್ ಹೈಕೋರ್ಟ್ ಚಿತ್ರದ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಸಿರ್ ಶುಕ್ಲಾ ಅವರನ್ನು ಪ್ರಕರಣದ ಪ್ರತಿವಾದಿಯಾಗಿ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ ಹಾಗೂ ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸುವಂತೆ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಇಂತಹ ಚಿತ್ರಗಳ ಮೂಲಕ ನಮ್ಮ ಸಹಿಷ್ಣುತೆಯನ್ನು ಪರೀಕ್ಷಿಸಲಾಗುತ್ತಿದೆಯೇ ಎಂದು ಅದು ಚಿತ್ರದ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿತು.
ಹಿಂದೂ ಪುರಾಣ ‘ರಾಮಾಯಣ’ವನ್ನು ಆಧರಿಸಿದ ಆದಿ ಪುರುಷ್ ಚಿತ್ರದ ಸಂಭಾಷಣೆಗಳು ಕೀಳುಮಟ್ಟದ್ದಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತಿವೆ. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಆಲಿಕೆಯ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘‘ ಆದಿಪುರುಷ್ ಚಿತ್ರದ ಸಂಭಾಷಣೆಗಳು ಒಂದು ದೊಡ್ಡ ವಿವಾದವಾಗಿ ಬಿಟ್ಟಿದೆ. ರಾಮಾಯಣವು ನಮಗೆ ಉತ್ಕೃಷ್ಟವಾದುದಾಗಿದೆ. ಜನರು ನಿತ್ಯವೂ ಮನೆಯಿಂದ ತೆರಳುವ ಮೊದಲು ರಾಮಚರಿತ ಮಾನಸವನ್ನು ಓದುವಂತಹ ಪರಿಪಾಠವಿದೆ’’ ಎಂದು ಹೇಳಿದ ನ್ಯಾಯಾಲಯವು,ಧಾರ್ಮಿಕ ಭಾವನೆಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ವಿಷಯಗಳನ್ನು ಸಿನೆಮಾಗಳು ಮುಟ್ಟಕೂಡದು ಎಂದು ಅಭಿಪ್ರಾಯಿಸಿತು.
ಈ ಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡುವ ವಿಷಯದಲ್ಲಿ ಸೆನ್ಸಾರ್ ಮಂಡಳಿಯು ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದೆಯೇ ಎಂದು ಹೈಕೋರ್ಟ್ ನ್ಯಾಯಾಲಯ ಪ್ರಶ್ನಿಸಿತು.
‘‘ ಚಿತ್ರದಲ್ಲಿ ಹನುಮಾನ್ ಹಾಗೂ ಸೀತಾದೇವಿಯನ್ನು ಬೇರೆಯೇ ರೀತಿಯಲ್ಲಿ ತೋರಿಸಲಾಗಿದೆ. ಇವೆಲ್ಲವುಗಳನ್ನು ಮೊದಲೇ ಚಿತ್ರದಿಂದ ತೆಗೆದುಹಾಕಬೇಕಿತ್ತು ಕೆಲವು ದೃಶ್ಯಗಳೂ ‘ಎ’ ಗ್ರೇಡ್ ನಂತಿವೆ. ಇಂತಹ ಚಿತ್ರಗಳನ್ನು ವೀಕ್ಷಿಸುವುದು ತುಂಬಾ ಕಷ್ಟ”. ಎಂದು ನ್ಯಾಯಾಲಯ ಅಭಿಪ್ರಾಯಿಸಿತು.