ಲೋಕಸಭಾ ಚುನಾವಣೆಗಿಂತ ಮುನ್ನವೇ ಸಿಎಎ ನಿಯಮಾವಳಿ ಮಂಡನೆ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ-2019ರ ನಿಯಮಾವಳಿಗಳ ಬಗ್ಗೆ ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೇ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಿಂದ ವಲಸೆ ಬರುವ ಆರು 'ಅಲ್ಪಸಂಖ್ಯಾತ' ಸಮುದಾಯಗಳ ಅರ್ಹರಿಗೆ ಪೌರತ್ವ ಮಂಜೂರು ಮಾಡುವುದು ಸಾಧ್ಯವಾಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಸಿಎಎ ಅಡಿಯಲ್ಲಿ ಅರ್ಜಿ ಸಲ್ಲಿಕೆ, ಸಂಸ್ಕರಣೆ ಮತ್ತು ಪೌರತ್ವ ಮಂಜೂರಾತಿಗೆ ಆನ್ ಲೈನ್ ವ್ಯವಸ್ಥೆಯನ್ನು ಕಲ್ಪಿಸುವ ಸಾಧ್ಯತೆಯನ್ನು ಗೃಹ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ- 2019ರ ಡಿಸೆಂಬರ್ ನಲ್ಲಿ ಅಧಿಕೃತವಾಗಿದ್ದು, 2020ರ ಜನವರಿ 10ರಂದು ಜಾರಿಗೊಳಿಸಲಾಗಿದೆ. ಆದರೆ ಸಿಎಎ ನಿಯಮಾವಳಿಗಳ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ. ಆದ್ದರಿಂದ ಕಾಯ್ದೆಯ ಜಾರಿ ಸಾಧ್ಯವಾಗಿಲ್ಲ ಅಥವಾ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಗೆ ಸೇರಿದ, 2014ರ ಡಿಸೆಂಬರ್ 31ಕ್ಕೆ ಮುನ್ನ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಕ್ಖ್, ಜೈನ, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಪೌರತ್ವ ನೀಡುವುದು ಸಾಧ್ಯವಾಗಿಲ್ಲ.
ಈ ಕಾಯ್ದೆಯ ಜಾರಿಗೆ ಮುಸ್ಲಿಂ ಸಮುದಾಯ ಹಾಗೂ ವಿರೋಧ ಪಕ್ಷಗಳಿಂದ ದೊಡ್ಡ ಪ್ರಮಾಣದ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದು ತಾರತಮ್ಯ ನೀತಿ ಹಾಗೂ ಇದನ್ನು ವಾಪಾಸು ಪಡೆಯಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿತ್ತು. ಇದರ ನಿಯಮಾವಳಿಗಳ ಅಧಿಸೂಚನೆ ವಿಳಂಬವಾಗಿದ್ದು, ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಸಾಧ್ಯವಾಗಿರಲಿಲ್ಲ ಎಂದು ಸರ್ಕಾರ ಹೇಳಿತ್ತು.