ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ ಸಭೆ ನಡೆಸಿದ ಕಾಂಗ್ರೆಸ್
ಹೊಸದಿಲ್ಲಿ: ಸೆಪ್ಟೆಂಬರ್ 18ರಂದು ಪ್ರಾರಂಭವಾಗಲಿರುವ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ, ಮಂಗಳವಾರ ಕಾಂಗ್ರೆಸ್ ಪಕ್ಷವು ಸಮಾಲೋಚನಾ ಸಭೆಯನ್ನು ನಡೆಸಿತು ಎಂದು ndtv.com ವರದಿ ಮಾಡಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಈ ಸಭೆಯು ನಡೆಯಿತು. ಜನಪಥ್ ನಿವಾಸದಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಮತ್ತಿತರ ಪ್ರಮುಖ ನಾಯಕರು ಆಗಮಿಸಿದ್ದರು.
ಇದಕ್ಕೂ ಮುನ್ನ ರವಿವಾರ ಸಾಮಾನ್ಯ ಸ್ವರೂಪದ ಜ್ವರದಿಂದ ಬಳಲುತ್ತಿದ್ದ ಸೋನಿಯಾ ಗಾಂಧಿ, ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು.
ಸಂಸತ್ ಅಧಿವೇಶನದಲ್ಲಿ ಉದ್ಭವಿಸಬಹುದಾದ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕಾರ್ಯತಂತ್ರದ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ವಿಶೇಷ ಸಂಸತ್ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಚರ್ಚಿಸಲು INDIA ಮೈತ್ರಿಕೂಟದ ಸಂಸದ ಸಭೆಯನ್ನು ಕರೆದಿದ್ದಾರೆ.
ಕಳೆದ ವಾರ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸೆಪ್ಟೆಂಬರ್ 18-22ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ಆಯೋಜನೆಗೊಂಡಿರುವ ಕುರಿತು ಪ್ರಕಟಿಸಿದ್ದರು. ಆದರೆ, ಈ ವಿಶೇಷ ಅಧಿವೇಶನದ ಕಾರ್ಯಸೂಚಿ ಏನು ಎಂಬುದು ಈವರೆಗೆ ಬಹಿರಂಗಗೊಂಡಿಲ್ಲ.