ಸಾರ್ವಜನಿಕವಾಗಿ ಲಭ್ಯ ಪುಸ್ತಕದ ಕುರಿತು ಚರ್ಚೆಗಾಗಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಸಾಧ್ಯವಿಲ್ಲ: ಕೇರಳ ಹೈಕೋರ್ಟ್

Update: 2024-08-05 05:02 GMT

 ಕೇರಳ ಹೈಕೋರ್ಟ್

ತಿರುವನಂತಪುರ: ಸಾರ್ವಜನಿಕವಾಗಿ ಲಭ್ಯವಿರುವ ಪುಸ್ತಕದ ಕುರಿತು ಚರ್ಚಿಸಿದ್ದಕ್ಕಾಗಿ ಮಾಧ್ಯಮ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಕೇರಳ ಉಚ್ಚ ನ್ಯಾಯಾಲಯವು, ಮಲಯಾಳಂ ಸುದ್ದಿವಾಹಿನಿಯೊಂದರ ಸಂಪಾದಕರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಿದೆ.

ರಿಪೋರ್ಟರ್ ಚಾನೆಲ್‌ನ ಕಾರ್ಯನಿರ್ವಾಹಕ ಸಂಪಾದಕ ಪ್ರಕಾಶ್, ನಿರ್ದೇಶಕ ಮತ್ತು ಮುಖ್ಯ ಸಂಪಾದಕ ಎಂ.ವಿ.ನಿಕೇಶ್ ಕುಮಾರ್ ಅವರು ‘ಬಿಗ್ ಸ್ಟೋರಿ’ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಮೂಲಕ ಆಧ್ಯಾತ್ಮಿಕ ನಾಯಕಿ ಅಮೃತಾನಂದಮಯಿ ಮತ್ತು ಅವರ ಸಂಸ್ಥೆಯ ಮಾನಹಾನಿಯನ್ನು ಮಾಡಿದ್ದಾರೆ ಎಂದು ಆರೋಪಿಸಿಲಾಗಿತ್ತು.

ಕಾರ್ಯಕ್ರಮವು ಗೇಲ್ ಟ್ರೆಡ್‌ವೆಲ್ ಅವರ ‘ಹೋಲಿ ಹೆಲ್‌‘ ಪುಸ್ತಕವನ್ನು ಆಧರಿಸಿತ್ತು.

ಚಾನೆಲ್ ಅಮೃತಾನಂದಮಯಿಯವರ ಮಾನಹಾನಿಯನ್ನುಂಟು ಮಾಡಿದೆ ಎಂದು ಆರೋಪಿಸಿ ಅವರ ಅನುಯಾಯಿಯೋರ್ವರು 2014ರಲ್ಲಿ ಮಾನನಷ್ಟ ದೂರನ್ನು ದಾಖಲಿಸಿದ್ದು,‌ ಪ್ರಕಾಶ್ ಮತ್ತು ಕುಮಾರ್ ಇದನ್ನು ಪ್ರಶ್ನಿಸಿದ್ದರು.

ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಪಿ.ವಿ.ಕುಞಿಕೃಷ್ಣನ್ ಅವರ ಪೀಠವು,ಹೋಲಿ ಹೆಲ್ ಪುಸ್ತಕವು ಸಾರ್ವಜನಿಕವಾಗಿ ಲಭ್ಯವಿದೆ ಮತ್ತು ಮಲಯಾಳಂ ಭಾಷೆಗೂ ಅನುವಾದಗೊಂಡಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು.

ಅರ್ಜಿದಾರರು ಸುಮ್ಮನಿರಬೇಕು ಮತ್ತು ಪುಸ್ತಕದ ಕುರಿತು ಚರ್ಚಿಸಬಾರರು ಎಂದು ನಿರೀಕ್ಷಿಸುವಂತಿಲ್ಲ ಎಂದು ಹೇಳಿದ ನ್ಯಾಯಾಲಯವು,ಮಾತಾ ಅಮೃತಾನಂದಮಯಿ ಮಠ ಅಥವಾ ಅದರ ಭಕ್ತರು ಪುಸ್ತಕದ ಲೇಖಕ ಅಥವಾ ಪ್ರಕಾಶಕರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಅದರ ಬಗ್ಗೆ ಚರ್ಚಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಅದು ಕೇವಲ ಪುಸ್ತಕದಲ್ಲಿಯ ವಿಷಯದ ನ್ಯಾಯಸಮ್ಮತ ಮತ್ತು ಪ್ರಾಮಾಣಿಕ ಚರ್ಚೆಯಾಗಿತ್ತು. ಅದನ್ನು ನಿಷೇಧಿಸಿದರೆ ಅದು ಮಾಧ್ಯಮಗಳ ವಾಕ್‌ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯವು ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News