ಆದಾಯ ತೆರಿಗೆ ಇಲಾಖೆ ನೋಟಿಸ್ ಗೆ ತಡೆ ನೀಡುವಂತೆ ಕೋರಿದ ಕಾಂಗ್ರೆಸ್ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಬಾಕಿ ಇರುವ 100 ಕೋ.ರೂ.ಗೂ ಅಧಿಕ ತೆರಿಗೆ ವಸೂಲಾತಿಗೆ ಕಾಂಗ್ರೆಸ್ ಗೆ ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಿದ ನೋಟಿಸ್ ಗೆ ತಡೆ ನೀಡಲು ನಿರಾಕರಿಸಿ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ (ಐಟಿಎಟಿ) ನೀಡಿದ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಎತ್ತಿ ಹಿಡಿದಿದೆ.
ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ಮಾರ್ಚ್ 8ರಂದು ನೀಡಿದ ಆದೇಶದಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ನ್ಯಾಯಮೂರ್ತಿಗಳಾದ ಯಶ್ವಂತ್ ವರ್ಮಾ ಹಾಗೂ ಪುರುಷೋತ್ತಮ ಕುಮಾರ್ ಕೌರವ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಕಾಂಗ್ರೆಸ್ ಹಾಗೂ ಆದಾಯ ತೆರಿಗೆ ಇಲಾಖೆಯ ಪರವಾಗಿ ಹಾಜರಾಗಿದ್ದ ನ್ಯಾಯವಾದಿಗಳು ಮಂಡಿಸಿದ ವಾದವನ್ನು ಆಲಿಸಿದ ಬಳಿಕ ಪೀಠ ಮಂಗಳವಾರ ಆದೇಶವನ್ನು ಕಾಯ್ದಿರಿಸಿತ್ತು.
ತನ್ನ ವಿರುದ್ಧ ವಸೂಲಾತಿ ಪ್ರಕ್ರಿಯೆಯನ್ನು ಆರಂಭಿಸಲು ಆದಾಯ ತೆರಿಗೆ ಇಲಾಖೆ ಫೆಬ್ರವರಿ 13ರಂದು ನೀಡಿದ ನೋಟಿಸಿಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ತಿರಸ್ಕರಿಸಿದ ಬಳಿಕ ಕಾಂಗ್ರೆಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು.