ಕುಸ್ತಿಪಟುಗಳ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ: ಬಿಜೆಪಿ ನಾಯಕ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಕುಸ್ತಿಪಟುಗಳಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂಬ ಆರೋಪಗಳನ್ನು ಗುರುವಾರ ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ.
ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಆರು ಮಂದಿ ಮಹಿಳಾ ಕುಸ್ತಿಪಟಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದ ನಂತರ, ಎಪ್ರಿಲ್ 2023ರಲ್ಲಿ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಜೂನ್ 15, 2024ರಲ್ಲಿ 1000 ಪುಟಗಳ ಆರೋಪ ಪಟ್ಟಿಯನ್ನು ದಿಲ್ಲಿ ಪೊಲೀಸರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್, ಸದರಿ ಮಹಿಳಾ ಕುಸ್ತಿಪಟುವು ಸಾಕ್ಷ್ಯ ನುಡಿಯುವವರೆಗೂ ಹಾಗೂ ನ್ಯಾಯಾಲಯದ ಮುಂದಿನ ಆದೇಶದವರೆಗೂ ಆಕೆಗೆ ಒದಗಿಸಲಾಗಿರುವ ಭದ್ರತೆಯನ್ನು ಮುಂದುವರಿಸಬೇಕು ಎಂದು ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೆ, ಮಹಿಳಾ ಕುಸ್ತಿಪಟುಗಳಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಹಿಂಪಡೆಯಲು ಕಾರಣವೇನು ಎಂಬ ವರದಿ ಸಲ್ಲಿಸುವಂತೆ ಸಂಬಂಧಿತ ಉಪ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.
ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ದಿಲ್ಲಿ ಪೊಲೀಸರು, ಮಹಿಳಾ ಕುಸ್ತಿಪಟುಗಳು ಹರ್ಯಾಣದಲ್ಲಿ ವಾಸಿಸುತ್ತಿರುವುದರಿಂದ, ಅವರಿಗೆ ಒದಗಿಸಲಾಗಿರುವ ಭದ್ರತೆಯನ್ನು ಹರ್ಯಾಣ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಕುಸ್ತಿಪಟು ವಿನೇಶ್ ಫೋಗಟ್, ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯಲಿರುವ ಮಹಿಳಾ ಕುಸ್ತಿಪಟುಗಳಿಗೆ ಒದಗಿಸಲಾಗಿದ್ದ ಭದ್ರತೆಯನ್ನು ದಿಲ್ಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲಿರುವ ಓರ್ವ ಮಹಿಳಾ ಕುಸ್ತಿಪಟುಗೆ ಅದಕ್ಕೂ ಹಿಂದಿನ ದಿನ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಮೂವರು ಮಹಿಳಾ ಕುಸ್ತಿಪಟುಗಳು ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು Live Law ವರದಿ ಮಾಡಿದೆ.