ಸನಾತನ ವಿವಾದ; ಅಭಿಪ್ರಾಯ ವ್ಯಕ್ತಪಡಿಸಲು ಉದಯನಿಧಿಗೆ ಹಕ್ಕಿದೆ ಎಂದ ನಟ ಕಮಲ್ ಹಾಸನ್

Update: 2023-09-09 16:18 GMT

 ಉದಯನಿಧಿ, ಕಮಲ್ ಹಾಸನ್ | Photo: PTI 

ಹೊಸದಿಲ್ಲಿ: ಸನಾತನ ಧರ್ಮದ ಬಗ್ಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಲಾಗುತ್ತಿದೆಯೆಂದು ತಮಿಳು ಚಿತ್ರನಟ- ರಾಜಕಾರಣಿ ಕಮಲ್ ಹಾಸನ್ ಖಂಡಿಸಿದ್ದಾರೆ. ಆರೋಗ್ಯಕರವಾದ ಸಂವಾದಗಳಿಗೆ ತಮಿಳುನಾಡು ಯಾವತ್ತೂ ಸುರಕ್ಷಿತವಾದ ಸ್ಥಳವಾಗಿದೆ ಎಂದವರು ಹೇಳಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ ಒಂದು ವೇಳೆ ನೀವು ಉದಯನಿಧಿ ಅವರ ಅನಿಸಿಕೆಯನ್ನು ಒಪ್ಪದೇ ಇದ್ದಲ್ಲಿ, ಹಿಂಸಾಚಾರದ ಬೆದರಿಕೆ ಅಥವಾ ಕಾನೂನು ಕ್ರಮದ ತಂತ್ರಗಳಿಗೆ ಮೊರೆಹೋಗುವ ಬದಲು ಸನಾತನದ ಉತ್ತಮ ವಿಚಾರಗಳನ್ನು ಆಧರಿಸಿದ ಚರ್ಚೆಯಲ್ಲಿ ತೊಡಗುವ ಹಕ್ಕು ನಿಮಗಿದೆ’’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

‘‘ಯಾವುದೇ ವಿಚಾರವನ್ನು ಒಪ್ಪದೇ ಇರುವುದು ಹಾಗೂ ಸಂವಾದವನ್ನು ಮುಂದುವರಿಸುವ ಸಾಮರ್ಥ್ಯವನ್ನು ಪಡೆಯುವುದು ನೈಜ ಪ್ರಜಾಪ್ರಭುತ್ವದ ಹೆಗ್ಗುರುತಾಗಿದೆ. ಸರಿಯಾದ ಪ್ರಶ್ನೆಗಳನ್ನು ಕೇಳುವ ಮೂಲಕ ಮಹತ್ವದ ಉತ್ತರಗಳನ್ನು ಪಡೆಯಲು ಸಾಧ್ಯವೆಂಬುದನ್ನು ಇತಿಹಾಸವು ನಮಗೆ ಪದೇ ಪದೇ ಕಲಿಸಿಕೊಟ್ಟಿದೆ . ಆ ಮೂಲಕ ಉತ್ತಮ ಸಮಾಜವಾಗಿ ನಮ್ಮ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದೆ’’ ಎಂದು ಮಕ್ಕಳ್ ನೀದಿ ಮೈಯಾಮ್ ಪಕ್ಷದ ನಾಯಕರೂ ಆದ ಕಮಲ್ ಹಾಸನ್ ಹೇಳಿದ್ದಾರೆ.

ತಮಿಳುನಾಡು ಯಾವಾಗಲೂ ಆರೋಗ್ಯಕರ ಚರ್ಚೆಗಳಿಗೆ ಸುರಕ್ಷಿತ ಸ್ಥಳವಾಗಿದೆ ಮತ್ತು ಅದು ಹಾಗೆಯೇ ಉಳಿದುಕೊಳ್ಳಲಿದೆ. ನಮ್ಮ ಸಂಪ್ರದಾಯಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುವುದು ಅತ್ಯಂತ ಮುಖ್ಯವಾದುದಾಗಿದೆ. ಆ ಮೂಲಕ ಎಲ್ಲರ ಒಳಪಡಿಸುವಿಕೆ, ಸಮಾನತೆ ಹಾಗೂ ಪ್ರಗತಿಯನ್ನು ಖಾತರಿಪಡಿಸಬಹುದಾಗಿದೆ. ಸೌಹಾರ್ದಯುತವಾದ ಹಾಗೂ ಎಲ್ಲರನ್ನೂ ಒಳಗೊಂಡ ಸಮಾಜವನ್ನು ಪೋಷಿಸಲು ರಚನಾತ್ಮಕವಾದ ಚರ್ಚೆಗಳನ್ನು ಅಪ್ಪಿಕೊಳ್ಳೋಣ’’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News