ವಿವಿಧ ಬೇಡಿಕೆಗಳ ಈಡೇರಿಕೆಗೆ ಸೂಚಿಸುವಂತೆ ಕೋರಿ ಸುಪ್ರೀಂ ಮೊರೆ ಹೋಗಲು ನಿರ್ಧರಿಸಿದ ರೈತ ಮುಖಂಡರು
ಹೊಸದಿಲ್ಲಿ: ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸುವ ಸಲುವಾಗಿ ಈ ತಿಂಗಳ 29ರವರೆಗೂ ದೆಹಲಿ ಚಲೋ ಜಾಥವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ರೈತ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗೆ ಸೂಚಿಸುವಂತೆ ಕೋರಿ ಸುಪ್ರೀಂಕೋರ್ಟ್ ನ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಎರಡೂ ಗಡಿಗಳಲ್ಲಿ ಈ ನಿರ್ಧಾರ ಕೈಗೊಂಡಿವೆ. ಕಳೆದ ವಾರ ದೆಹಲಿ ಚಲೋ ಆರಂಭಿಸಿದ್ದ ಸಾವಿರಾರು ರೈತರನ್ನು ರಾಜಧಾನಿಯ ಉತ್ತರದಲ್ಲಿ 200 ಕಿಲೋಮೀಟರ್ ದೂರದಲ್ಲಿ ತಡೆಹಿಡಿಯಲಾಗಿದೆ. ಭದ್ರತಾ ಪಡೆಗಳ ಜತೆಗಿನ ಘರ್ಷಣೆಯಲ್ಲಿ ರೈತ ಮೃತಪಟ್ಟಿರುವುದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಇದುವರೆಗೆ ಪ್ರತಿಭಟನೆಯಿಂದ ದೂರ ಉಳಿದಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಕೂಡಾ ಕೈಜೋಡಿಸಲು ನಿರ್ಧರಿಸಿದೆ.
ರೈತರಿಂದ ಫೆಬ್ರವರಿ 24ರಂದು ಮೊಂಬತ್ತಿ ಜಾಥಾ, 25ರಂದು ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಬಗ್ಗೆ ವಿಚಾರ ಸಂಕಿರಣ, 26ರಂದು ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಪ್ರತಿಕೃತಿ ದಹನಕ್ಕೆ ನಿರ್ಧರಿಸಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಎಸ್ ಕೆಎಂ ಹಾಗೂ ಕೆಎಂಎಂ ಚರ್ಚಿಸಲಿವೆ ಎಂದು ಕಿಸಾನ್ ಮಜ್ದೂರ್ ಮೋರ್ಚಾ ಮುಖಂಡ ಪಾಂಧೇರ್ ಹೇಳಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಸಚಿವರ ಪ್ರತಿಕೃತಿಗಳನ್ನು ದಹನ ಮಾಡಿದ ರೈತರು, ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳಲ್ಲಿ ಕಪ್ಪುಬಾವುಟಗಳನ್ನು ಪ್ರದರ್ಶಿಸಿದರು. ಹಲವು ಮಂದಿ ಪ್ರತಿಭಟನಾಕಾರರು ಕಪ್ಪು ಬಟ್ಟೆ ಮತ್ತು ರುಮಾಲುಗಳನ್ನು ಸುತ್ತಿಕೊಂಡು ಭಾಗವಹಿಸಿದ್ದರು.