ಜನರ ಆಕ್ರೋಶಕ್ಕೆ ಮಣಿದ ಮಣಿಪುರ ಸರಕಾರ | ಈಸ್ಟರ್ ವಾರಾಂತ್ಯವನ್ನು ಕೆಲಸದ ದಿನಗಳೆಂದು ಘೋಷಿಸಿದ್ದ ಆದೇಶ ವಾಪಸ್
ಇಂಫಾಲ : ವಾರಾಂತ್ಯದ ದಿನಗಳಾದ ಮಾ.30 ಮತ್ತು 31ನ್ನು ಸರಕಾರಿ ಕಚೇರಿಗಳು, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು,ಕಾರ್ಪೊರೇಷನ್ಗಳು,ಸ್ವಾಯತ್ತ ಸಂಸ್ಥೆಗಳು ಮತ್ತು ಸೊಸೈಟಿಗಳಿಗೆ ಕೆಲಸದ ದಿನಗಳು ಎಂದು ಘೋಷಿಸಿ ಹೊರಡಿಸಿದ್ದ ತನ್ನ ಆದೇಶವನ್ನು ಮಣಿಪುರ ಸರಕಾರವು ಗುರುವಾರ ಹಿಂದೆಗೆದುಕೊಂಡಿದೆ. ಈಸ್ಟರ್ ಹಬ್ಬವನ್ನೂ ಇದೇ ಸಂದರ್ಭದಲ್ಲಿ ಆಚರಿಸಲಾಗುತ್ತಿದ್ದು,ರಾಜ್ಯದ ಬುಡಕಟ್ಟು ಗುಂಪುಗಳು ತೀವ್ರ ಆಕ್ರೋಶ ವ್ಯಕ್ತಪಡಿದ ಬಳಿಕ ತನ್ನ ಆದೇಶವನ್ನು ಹಿಂದೆಗೆದುಕೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು. ಗುಡ್ ಫ್ರೈಡೆ ಮತ್ತು ಈಸ್ಟರ್ ಸಂಡೆ ಎರಡೂ ರಜಾದಿನಗಳಾಗಿರುತ್ತವೆ ಎಂದು ಸರಕಾರವು ಈಗ ಸ್ಪಷ್ಟಪಡಿಸಿದೆ.
2023-24ನೇ ವಿತ್ತವರ್ಷವು ಅಂತ್ಯಗೊಳ್ಳುತ್ತಿರುವುದರಿಂದ ಮಾ.30 ಮತ್ತು 31ರಂದು ಎಲ್ಲ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸಬೇಕು ಎಂದು ಮಣಿಪುರ ಸರಕಾರವು ಬುಧವಾರ ರಾಜ್ಯಪಾಲರ ಹೆಸರಿನಲ್ಲಿ ಆದೇಶವನ್ನು ಹೊರಡಿಸಿತ್ತು.
2011ರ ಜನಗಣತಿಯಂತೆ ಮಣಿಪುರದಲ್ಲಿ 28 ಲಕ್ಷ ಕ್ರೈಸ್ತರಿದ್ದು,ರಾಜ್ಯದ ಜನಸಂಖ್ಯೆಯಲ್ಲಿ ಶೇ.41.2ರಷ್ಟು ಪಾಲು ಹೊಂದಿದ್ದಾರೆ. ಅವರು ಕುಕಿಗಳು,ರೆ ಮತ್ತು ನಾಗಾಗಳಂತಹ ಬುಡಕಟ್ಟುಗಳು ಸಮುದಾಯಗಳಿಗೆ ಸೇರಿದ್ದಾರೆ.
ಸರಕಾರದ ಆದೇಶಕ್ಕೆ ರಾಜ್ಯದ ಪರಿಶಿಷ್ಟ ಪಂಗಡ ಸಮುದಾಯ, ವಿಶೇಷವಾಗಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಗಳಲ್ಲಿ ಭಾರೀ ಸಾವುಗಳನ್ನು ಕಂಡಿರುವ ಕುಕಿ-ರೆ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಮೈತೈ ಬಹುಮತದ ಸರಕಾರದಿಂದ ತಮ್ಮನ್ನು ಗುರಿಯಾಗಿಸಿಕೊಳ್ಳಲು ಇನ್ನೊಂದು ಯತ್ನ ಎಂದು ಹಲವರು ಬಣ್ಣಿಸಿದ್ದರು. ಯುನೈಟೆಡ್ ಕ್ರಿಶ್ಚಿಯನ್ ಫೋರಮ್ನಂತಹ ಕ್ರಿಶ್ಚಿಯನ್ ಹಕ್ಕುಗಳ ಗುಂಪುಗಳೂ ‘ಅಸಾಂವಿಧಾನಿಕ ’ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದವು.