ಎಕ್ಸ್ ಒಂದು ವಿಷಕಾರಿ ವೇದಿಕೆ : ಇನ್ನು ಮುಂದೆ ಎಕ್ಸ್ ನಲ್ಲಿ ಪೋಸ್ಟ್ ಮಾಡುವುದಿಲ್ಲ ಎಂದು ಘೋಷಿಸಿದ ‘ದಿ ಗಾರ್ಡಿಯನ್’

Update: 2024-11-14 16:08 GMT

ಲಂಡನ್ : ಇನ್ನು ಮುಂದೆ ನಮ್ಮ ಸುದ್ದಿ ತುಣುಕುಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡುವುದಿಲ್ಲ ಎಂದು ಗುರುವಾರ ದಿ ಗಾರ್ಡಿಯನ್ ಸುದ್ದಿ ಸಂಸ್ಥೆ ಘೋಷಿಸಿದೆ. ಈ ಕುರಿತು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಬ್ರಿಟನ್ ಮೂಲದ ಸುದ್ದಿ ಸಂಸ್ಥೆಯು, “ಎಕ್ಸ್ ನಲ್ಲಿರುವುದರ ಲಾಭವನ್ನು ಅಲ್ಲಿನ ನಕಾರಾತ್ಮಕತೆ ಹಿಂದಿಕ್ಕಿದೆ. ನಮ್ಮ ಪತ್ರಿಕೋದ್ಯಮವನ್ನು ಮತ್ತೆಲ್ಲಾದರೂ ಪ್ರಚಾರ ಮಾಡಲು ಸಂಪನ್ಮೂಲಗಳನ್ನು ಇನ್ನೂ ಉತ್ತಮವಾಗಿ ಬಳಸಿಕೊಳ್ಳಬಹುದಾಗಿದೆ” ಎಂದು ಹೇಳಿದೆ.

“ಬಲಪಂಥೀಯ ಪರ ವಾದಗಳು ಹಾಗೂ ಜನಾಂಗೀಯವಾದ ಸೇರಿದಂತೆ ಹಲವು ಮನ ಕಲಕುವ ಸುದ್ದಿ ತುಣುಕುಗಳು ಈ ವೇದಿಕೆಯ ಮೂಲಕ ಪ್ರಚಾರವಾಗುತ್ತಿರುವುದು ಅಥವಾ ಕಂಡು ಬರುತ್ತಿರುವುದರಿಂದ ಈ ನಿರ್ಧಾರವನ್ನು ನಾವು ಹಲವಾರು ದಿನಗಳಿಂದ ಪರಿಗಣಿಸಿದ್ದೆವು. ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರವು ನಾವು ದೀರ್ಘಾವಧಿಯಿಂದ ಏನನ್ನು ಪರಿಗಣಿಸಿದ್ದೇವೊ ಅದಕ್ಕೆ ಒತ್ತು ನೀಡಿತು. ಅದೆಂದರೆ, ಎಕ್ಸ್ ವಿಷಕಾರಿ ಮಾಧ್ಯಮ ವೇದಿಕೆಯಾಗಿದ್ದು, ಅದರ ಮಾಲಕ ಎಲಾನ್ ಮಸ್ಕ್ ರಾಜಕೀಯ ನಿಲುವುಗಳನ್ನು ರೂಪಿಸಲು ಅದರ ಪ್ರಭಾವವನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ನಮ್ಮ ಕೆಲಸಗಳನ್ನು ಪ್ರಚಾರ ಮಾಡುವಲ್ಲಿ ಎಕ್ಸ್ ನಗಣ್ಯ ಪಾತ್ರ ವಹಿಸುತ್ತಿರುವುದರಿಂದ, ನಾವು ನಮ್ಮ ಕೆಲಸಕ್ಕೆ ನಮ್ಮ ಅಂತರ್ಜಾಲ ತಾಣದ ಮೂಲಕ ಜನರ ಬೆಂಬಲ ಪಡೆಯುವುದನ್ನು ಪರಿಗಣಿಸುತ್ತೇವೆ ಎಂದು ದಿ ಗಾರ್ಡಿಯನ್ ಹೇಳಿದೆ.

ಹೀಗಿದ್ದೂ, ಬಳಕೆದಾರರು ದಿ ಗಾರ್ಡಿಯನ್ ಸುದ್ದಿಗಳನ್ನು ಎಕ್ಸ್ ಮೂಲಕ ಹಂಚಿಕೊಳ್ಳಲು ಸಾಧ್ಯವಿದೆ. ನಮ್ಮ ವರದಿಗಾರರೂ ಕೂಡಾ ಸುದ್ದಿ ಸಂಗ್ರಹದ ಉದ್ದೇಶದಿಂದ ಎಕ್ಸ್ ಅನ್ನು ಬಳಸಬಹುದಾಗಿದೆ ಎಂದು ದಿ ಗಾರ್ಡಿಯನ್ ಸ್ಪಷ್ಟೀಕರಣ ನೀಡಿದೆ.

2022ರಲ್ಲಿ ಟ್ವಿಟರ್ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖರೀದಿಸಿದ ನಂತರ, ಅದಕ್ಕೆ ಮಾಡಿರುವ ಬದಲಾವಣೆಗಳ ಕುರಿತು ಎಲಾನ್ ಮಸ್ಕ್ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ. ಈ ನಡುವೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಬೆಂಬಲಿಸಿದ್ದ ಉದ್ಯಮಿ ಹಾಗೂ ಹೂಡಿಕೆದಾರ ಎಲಾನ್ ಮಸ್ಕ್ ರನ್ನು ವಿವೇಕ್ ರಾಮಸ್ವಾಮಿ ಅವರೊಂದಿಗೆ ನೂತನ ಇಲಾಖೆಯೊಂದಕ್ಕೆ ನೇಮಕ ಮಾಡಲಾಗಿದೆ.

ಸರಕಾರಿ ದಕ್ಷತೆ ಇಲಾಖೆಯನ್ನು ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಮುನ್ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ಮೂಲಕ ಅಮೆರಿಕವನ್ನು ರಕ್ಷಿಸಿ ಚಳವಳಿಗೆ ಅಗತ್ಯವಾಗಿರುವ ಸರಕಾರಿ ಅಧಿಕಾರಶಾಹಿಯ ಪುನಾರಚನೆ, ಅತಿಯಾದ ನಿಯಮಾವಳಿಗಳ ಕಡಿತ, ದುಂದುವೆಚ್ಚಗಳ ಕಡಿತ ಹಾಗೂ ತನಿಖಾ ಸಂಸ್ಥೆಗಳನ್ನು ಪುನಾರಚಿಸಲು ಈ ಇಬ್ಬರು ಅದ್ಭುತ ಅಮೆರಿಕ ಪ್ರಜೆಗಳು ನನ್ನ ಆಡಳಿತಕ್ಕೆ ದಾರಿ ಮಾಡಿಕೊಡಲಿದ್ದಾರೆ” ಎಂದೂ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News